ನವದೆಹಲಿ:ಮಧ್ಯಾಹ್ನಬಿಸಿಲು, ಸಂಜೆ ಆಗುತ್ತಿದ್ದಂತೆಯೇ ಶೀತಗಾಳಿಯ ಮರ್ಮಾಘಾತ. ಉತ್ತರ ಭಾರತ ತೀವ್ರ ಶೀತಗಾಳಿಯ ಹೊಡೆತಕ್ಕೆ ನಲುಗಿ ಹೋಗುತ್ತಿದೆ. ರಾಷ್ಟ್ರ ರಾಜಧಾನಿ ಮತ್ತು ವಿವಿಧ ರಾಜ್ಯಗಳ ಜನರು ಮಂಗಳವಾರ ಭಾರಿ ಶೀತಗಾಳಿ ಹೊಡೆತಕ್ಕೆ ಸಿಲುಕಿದರು. ಕೆಲವು ಭಾಗಗಳಲ್ಲಿ ತಾಪಮಾನ 3 ರಿಂದ 7 ಡಿಗ್ರಿ ಸೆಲ್ಸಿಯಸ್ಗೆ ಕುಸಿತ ಕಂಡಿದೆ.
ಮುಂದಿನ 48 ಗಂಟೆಗಳಲ್ಲಿ ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಬೀಳುವ ಸಾಧ್ಯತೆಗಳಿವೆ ಎಂದು IMD ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶ ತೀವ್ರ ಚಳಿಯಿಂದ ನಡುಗಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಟ್ಟವಾದ ಮಂಜಿನಿಂದಾಗಿ ಗೋಚರತೆ 50 ಮೀಟರ್‌ನಷ್ಟು ಕುಸಿತ ಕಂಡಿದೆ. ಉತ್ತರ ಭಾರತದ ಅನೇಕ ಭಾಗಗಳಲ್ಲಿ ರೈಲು, ರಸ್ತೆ ಮತ್ತು ವಿಮಾನ ಸಂಚಾರದ ಮೇಲೆ ದಟ್ಟವಾದ ಮಂಜು ಹಾಗೂ ಇಬ್ಬನಿ ತೀವ್ರವಾದ ಪರಿಣಾಮ ಬೀರಿದೆ. ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ ಏಳು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಐಎಂಡಿ ಹೇಳಿದೆ. ಉತ್ತರ ಭಾರತದಲ್ಲಿ ತೀವ್ರ ಚಳಿಯ ಬಗ್ಗೆ IMD ಎಚ್ಚರಿಕೆ ಕೂಡಾ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಗುಡ್ಡಗಾಡು ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ತೀವ್ರ ಚಳಿ ಇರುತ್ತದೆ ಎಂದು ಹೇಳಿದೆ. ಡಿಸೆಂಬರ್ 29 ಮತ್ತು 30 ರಂದು ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಹಿಮಪಾತವಾಗುವ ಸಾಧ್ಯತೆಯಿದೆ.
ಇದನ್ನು ಓದಿ:ಬಿಹಾರ: 11 ಮಂದಿ ವಿದೇಶಿಗರಲ್ಲಿ ಕೋವಿಡ್ ಪತ್ತೆ, ಎಲ್ಲರೂ ಕ್ವಾರಂಟೈನ್