ನವದೆಹಲಿ: ಕೇಂದ್ರ ಸರ್ಕಾರ ತನ್ನ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಜೊತೆಗೆ ರೈಲ್ವೆ ಇಲಾಖೆಯ ನೌಕರರಿಗೂ ಖುಷಿ ಸುದ್ದಿ ನೀಡಿದೆ. ರೈಲ್ವೆ ನೌಕರರಿಗೆ ತಮ್ಮ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಘೋಷಣೆ ಮಾಡಲಾಗಿದೆ. ಇದರ ಪ್ರಯೋಜನವನ್ನು 11.07 ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಅಲ್ಲದ ಸಿಬ್ಬಂದಿ ಪಡೆಯಲಿದ್ದಾರೆ ಎಂದು ಸರ್ಕಾರ ಬುಧವಾರ ಪ್ರಕಟಿಸಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಗೆಜೆಟೆಡ್ ಅಲ್ಲದ ಎಲ್ಲ ಅರ್ಹ ರೈಲ್ವೆ ಉದ್ಯೋಗಿಗಳಿಗೆ 2022-23ರ ಹಣಕಾಸು ವರ್ಷಕ್ಕೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆಗೆ ಸಂಬಂಧಿಸಿದ ಬೋನಸ್ (Productivity Linked Bonus-PLB) ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ತಿಳಿಸಿದರು.
ಈ ನಿರ್ಧಾರವು ಆರ್‌ಪಿಎಫ್ (ರೈಲ್ವೆ ರಕ್ಷಣಾ ಪಡೆ) ಮತ್ತು ಆರ್‌ಪಿಎಸ್‌ಎಫ್ (ರೈಲ್ವೆ ರಕ್ಷಣಾ ವಿಶೇಷ ಪಡೆ) ಸಿಬ್ಬಂದಿಯನ್ನು ಹೊರತುಪಡಿಸಿ ಟ್ರ್ಯಾಕ್ ನಿರ್ವಾಹಕರು, ಲೋಕೊ ಪೈಲಟ್‌ಗಳು, ರೈಲು ನಿರ್ವಾಹಕರು (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ಟೆಕ್ನಿಷಿಯನ್ಗಳು, ಟೆಕ್ನಿಷಿಯನ್ಗಳ ಸಹಾಯಕರು, ಪಾಯಿಂಟ್‌ಮನ್‌ಗಳು, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.