ನಾಗ್ಪುರ (ಮಹಾರಾಷ್ಟ್ರ): 2014ರ ಚುನಾವಣಾ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸದ ಆರೋಪ ಪ್ರಕರಣದ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ನಾಗ್ಪುರ ನ್ಯಾಯಾಲಯಕ್ಕೆ ಹಾಜರಾದರು. ಇದೇ ವೇಳೆ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಫಡ್ನವೀಸ್ ತಳ್ಳಿ ಹಾಕಿದ್ದಾರೆ.
ದೇವೇಂದ್ರ ಫಡ್ನವೀಸ್ ವಿರುದ್ಧ 1996 ಮತ್ತು 1998ರಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣಗಳು ದಾಖಲಾಗಿವೆ. ಆದರೆ, 2014ರ ವಿಧಾನಸಭಾ ಚುನಾವಣೆಗೆ ಮುನ್ನ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಹೀಗಾಗಿ ಫಡ್ನವೀಸ್ ವಿರುದ್ಧ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲ ಸತೀಶ್ ಉಕೆ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ 12 ಗಂಟೆಗೆ ಸಿವಿಲ್ ನ್ಯಾಯಾಧೀಶ ವಿ.ಎ.ದೇಶಮುಖ್ ಅವರ ಮುಂದೆ ಫಡ್ನವಿಸ್ ತಮ್ಮ ವಕೀಲರೊಂದಿಗೆ ಹಾಜರಾದರು. ಫಡ್ನವೀಸ್ ತಮ್ಮ ಹೇಳಿಕೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 313ರ ಅಡಿಯಲ್ಲಿ ಲಿಖಿತ ರೂಪದಲ್ಲಿ 110 ಪ್ರಶ್ನೆಗಳೊಂದಿಗೆ 35 ಪುಟಗಳನ್ನು ದಾಖಲಿಸಿದರು. ಈ ನಿಬಂಧನೆಯ ಅಡಿಯಲ್ಲಿ ದೂರುದಾರರು ಅವಲಂಬಿಸಿರುವ ಸಾಕ್ಷ್ಯದ ಮೇಲೆ ನ್ಯಾಯಾಲಯವು ಪ್ರಶ್ನೆಗಳನ್ನು ಕೇಳಿತ್ತು.
ವಕೀಲರೊಂದಿಗೆ ಚರ್ಚಿಸಿದ ನಂತರ ಫಡ್ನವಿಸ್ ಪ್ರತಿ ಪ್ರಶ್ನೆಗೆ ಉತ್ತರಗಳನ್ನು ಬರೆದಿದ್ದಾರೆ. ತಮ್ಮ ವಿರುದ್ಧ ದೂರಿನಲ್ಲಿ ಮಾಡಲಾದ ಎಲ್ಲ ಆರೋಪಗಳನ್ನು ಫಡ್ನವಿಸ್ ನಿರಾಕರಿಸಿದ್ದಾರೆ. ಅಲ್ಲದೇ, ಅವರು ಯಾವುದೇ ಅಪರಾಧ ಅಥವಾ ತಪ್ಪು ಮಾಡಿಲ್ಲ ಎಂದು ವಕೀಲರು ಸುದ್ದಿಗಾರರಿಗೆ ತಿಳಿಸಿದರು. ಒಂದೂವರೆ ಗಂಟೆ ನಂತರ ಫಡ್ನವೀಸ್ ಕೋರ್ಟ್ ಆವರಣದಿಂದ ನಿರ್ಗಮಿಸಿದರು. ನ್ಯಾಯಾಲಯವು ಮೇ 6ರಂದು ಅಂತಿಮ ವಿಚಾರಣೆಯನ್ನು ಮುಂದೂಡಿದೆ. ಮತ್ತೊಂದೆಡೆ, ದೂರುದಾರ ವಕೀಲ ಸತೀಶ್ ಉಕೆ ಸದ್ಯ ಮನಿ ಲಾಂಡರಿಂಗ್ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದು, ಜೈಲಿನಲ್ಲಿದ್ದಾರೆ.
ಇದನ್ನೂ ಓದಿ:ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಮಲಿಕ್ 'ಸ್ಫೋಟಕ ಸತ್ಯ' ಹೊರ ಹಾಕಿದ್ದಾರೆ: ಸಂಜಯ್ ರಾವತ್