ಲಖನೌ:ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ, ಕಾಂಗ್ರೆಸ್ ಮುಖಂಡರಾದ ರಾಜ್ ಬಬ್ಬರ್, ಪ್ರದೀಪ್ ಜೈನ್ ಸೇರಿ 9 ಜನರ ವಿರುದ್ಧ ಗುರುವಾರ ಲಖನೌದ ಎಂಪಿಎಂಎಲ್ಎ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ನೀಡಿದೆ.
2015ರಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಅಕ್ರಮ ದಾಳಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ಕೈಗೊಂಡಿತ್ತು. ಆದ್ರೆ ವಾರೆಂಟ್ ಜಾರಿಗೊಳಿಸಿದ್ರೂ ಸಹಿತ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ನ್ನು ಜಾರಿಗೊಳಿಸಿ ಡಿಸೆಂಬರ್ 8ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.
ಆಗಸ್ಟ್ 17, 2015ರಂದು ಕಾಂಗ್ರೆಸ್ ಇಲ್ಲಿನ ಲಕ್ಷ್ಮಣ್ ಮೇಳ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ವಿಧಾನಸಭೆಯತ್ತ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಗಲಭೆಯುಂಟಾಗಿ ಪೊಲೀಸರ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ರೀಟಾ ಬಹುಗುಣ ಜೋಶಿ, ರಾಜ್ ಬಬ್ಬರ್, ಜೈನ್ ಮತ್ತು ಇತರ ನಾಯಕರ ಮೇಲೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಸಮನ್ಸ್ ಮತ್ತು ವಾರೆಂಟ್‌ಗಳ ಹೊರತಾಗಿಯೂ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದಿದ್ದಾಗ ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ನ್ನು ಹೊರಡಿಸಿದರು. ಆ ಸಮಯದಲ್ಲಿ ರೀಟಾ ಬಹುಗುಣ ಜೋಶಿ ಕಾಂಗ್ರೆಸ್‌ನಲ್ಲಿದ್ದರು.