ನವದೆಹಲಿ:ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ್ದು, ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಇದಕ್ಕೂ ಮುಂಚೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಇಂದು ಆದೇಶವನ್ನು ಓದಲಿದ್ದಾರೆ ಎನ್ನಲಾಗಿತ್ತು. ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ. ಈ ಮೊದಲು ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಸುಶೀಲ್ ಕುಮಾರ್ ಅವರ ಪರ ಹಿರಿಯ ವಕೀಲ ಸಿದ್ದಾರ್ಥ್ ಲುಥ್ರಾ ಮತ್ತು ವಕೀಲ ಆರ್.ಎಸ್. ಜಖರ್ ವಾದಿಸಿದರೆ ದೆಹಲಿ ಪೊಲೀಸರನ್ನು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಪ್ರತಿನಿಧಿಸಿದ್ದರು.
ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ್ ಅವರು ಸುಶೀಲ್ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷಿಗಳಿವೆ ಹೀಗಾಗಿ ಸುಶೀಲ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಸಿಕ್ಕಿರುವ ವಿಡಿಯೋದಲ್ಲಿ ಸುಶೀಲ್ ಹೊಡೆಯುವುದನ್ನು ಕಾಣಬಹುದು ಎಂದು ಕೋರ್ಟ್ ಎದುರು ವಾದ ಮಂಡನೆ ಮಾಡಿದ್ದರು.
1 ಲಕ್ಷ ಬಹುಮಾನ:
ಈ ಮಧ್ಯೆ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಸುಶೀಲ್ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.