ನೋಯ್ಡಾ/ನವದೆಹಲಿ:ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಗೆ ನೋಯ್ಡಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಶ್ರೀಕಾಂತ್ ತ್ಯಾಗಿ ಮಾಲೀಕತ್ವದ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ಅಕ್ರಮವಾಗಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಬುಲ್ಡೋಜರ್ ಬಳಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಶ್ರೀಕಾಂತ್ ತ್ಯಾಗಿ ಬಂಧಿಸಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ.
ಸೋಮವಾರ ಬೆಳಗ್ಗೆ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರ, ಆರೋಪಿ ಶ್ರೀಕಾಂತ್ ತ್ಯಾಗಿ ಮನೆ ತೆರವುಗೊಳಿಸಲು ಕ್ರಮ ಕೈಗೊಂಡಿತ್ತು. ಮೊದಲು ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ತಲುಪಿದ ಪ್ರಾಧಿಕಾರದ ಅಧಿಕಾರಿಗಳು ಬುಲ್ಡೋಜರ್ನಿಂದ ಸಾಮಾನ್ಯ ಪ್ರದೇಶವನ್ನು ಮೊದಲು ಕೆಡವಲು ಆರಂಭಿಸಿದರು. ಬಳಿಕ ಶ್ರೀಕಾಂತ್ ತ್ಯಾಗಿ ಮನೆಯನ್ನು ಬುಲ್ಡೋಜರ್ನಿಂದ ಕೆಡವಲು ಅಧಿಕಾರಿಗಳು ಕಾರ್ಯಾಚರಣೆಯ ಕೈಗೊಂಡರು. ಈ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ಅಲ್ಲಿ ನಿಯೋಜಿಸಲಾಗಿತ್ತು.
ನೋಯ್ಡಾದ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ಅತಿಕ್ರಮ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು 2019ರಲ್ಲಿ ನೋಟಿಸ್ ನೀಡಿದ್ದರು. ಅಕ್ರಮ ಒತ್ತುವರಿ ಕುರಿತು ತ್ಯಾಗಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ಶ್ರೀಕಾಂತ್ ತ್ಯಾಗಿ ತಮ್ಮ ಪ್ರಭಾವ ಬಳಸಿ ಕಟ್ಟಡ ತೆರವುಗೊಳಿಸಲು ಅಡ್ಡಿಯಾಗಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಏನಿದು ಪ್ರಕರಣ?: ಓಮ್ಯಾಕ್ಸ್ ಗ್ರ್ಯಾಂಡ್ ಸೊಸೈಟಿಯ ಮಹಿಳೆಯೊಬ್ಬರು ಶ್ರೀಕಾಂತ್ ತ್ಯಾಗಿ ಅವರು ತಮ್ಮ ವಸತಿ ಸೊಸೈಟಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಾವು ಕೆಲವು ಮರಗಳನ್ನು ನೆಡುವುದಕ್ಕೆ ಮುಂದಾದಾಗ ಶ್ರೀಕಾಂತ್ ತ್ಯಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಚರ್ಚೆ ನಡುವೆಯೇ ತ್ಯಾಗಿ ಅಸಭ್ಯವಾಗಿ ವರ್ತಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೂಂಡಾಗಳನ್ನು ಕಳುಹಿಸಿದ್ರಾ ಶ್ರೀಕಾಂತ್ ತ್ಯಾಗಿ?: ಈ ದೂರಿನ ಬಳಿಕ ಸುಮಾರು ಹನ್ನೆರಡು ಜನರು ಸಂತ್ರಸ್ತೆಯ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ನಗರದಲ್ಲಿ ಹರಡಿದ ತಕ್ಷಣ ಸಮಾಜದ ಸಾವಿರಾರು ಜನರು ಜಮಾಯಿಸಿ ಮಹಿಳೆಯ ರಕ್ಷಣೆಗೆ ನಿಂತಿದ್ದಾರೆ. ಬಳಿಕ ಶ್ರೀಕಾಂತ್ ತ್ಯಾಗಿ ಗೂಂಡಾಗಳನ್ನು ಕಳುಹಿಸುವ ಮೂಲಕ ಸಮಾಜದ ಜನರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಗರ ವಾಸಿಗಳು ಆರೋಪಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಅಮಾನತು:ಈ ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹೆಚ್ಚುತ್ತಿರುವ ಗಲಾಟೆಯನ್ನು ಕಂಡು ಪೊಲೀಸ್ ಅಧಿಕಾರಿಗಳು ಮತ್ತು ಮುಖಂಡರು ಕೂಡ ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನ ಪಡಿಸಿದರು. ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.