ಕರ್ನಾಟಕ

karnataka

ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

By

Published : Apr 17, 2022, 10:54 AM IST

ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಳಿಕ ನೋಯ್ಡಾ ಪೊಲೀಸರು ಅಲರ್ಟ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Jahangirpuri violence
ಜಹಾಂಗೀರ್‌ಪುರಿ ಹಿಂಸಾಚಾರ

ನೋಯ್ಡಾ (ಉತ್ತರ ಪ್ರದೇಶ): ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಾಯುವ್ಯ ಡಿಸಿಪಿ ಉಷಾ ರಂಗ್ನಾನಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ತನಿಖೆ ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ವಾತಾವರಣ ಶಾಂತಿಯುತವಾಗಿದೆ. ನಾವು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ರಕ್ಷಣೆಗಾಗಿ ಸಾಕಷ್ಟು ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಇಲ್ಲಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್ ಕಮಿಷನರ್ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ತಂಡ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿತು. ಈ ಪ್ರಕ್ರಿಯೆಯಲ್ಲಿ ಕೆಲವು ಪೊಲೀಸರು ಗಾಯಗೊಂಡರು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಅವರು ಹೇಳಿದರು.

ಧ್ವಜ ಮೆರವಣಿಗೆ:ಘಟನೆಯ ಬಳಿಕ ನೋಯ್ಡಾ ಪೊಲೀಸರು ಅಲರ್ಟ್ ಆಗಿದ್ದು, ಸಾರ್ವಜನಿಕರಿಗೆ ನಂಬಿಕೆ ಮತ್ತು ಭದ್ರತೆಯ ವಾತಾವರಣವನ್ನು ಸೃಷ್ಟಿಸುವ ಗುರಿಯೊಂದಿಗೆ ಧ್ವಜ ಮೆರವಣಿಗೆ ನಡೆಸಿದರು.

ಹಿಂಸಾಚಾರವನ್ನು ಖಂಡಿಸಿದ ಕೇಜ್ರಿವಾಲ್:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹಿಂಸಾಚಾರವನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಇದೆ. ಶಾಂತಿ ಕಾಪಾಡಲು ಜನರಿಗೆ ಮನವಿ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ. ಇದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಮತ್ತು ಡಿಪೇಂದರ್ ಪಾಠಕ್ ಅವರೊಂದಿಗೆ ಜಹಾಂಗೀರ್​​ಪುರಿ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಸದಹನ್ಸ್ ರಾಜ್ ಭೇಟಿ:ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಪ್ರದೇಶಕ್ಕೆ ವಾಯುವ್ಯ ದೆಹಲಿಯ ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್ ಅವರು ಇಂದು (ಭಾನುವಾರ) ಮುಂಜಾನೆ ಭೇಟಿ ನೀಡಿದರು. "ನನಗೆ ನಿದ್ದೆ ಬರಲಿಲ್ಲ. ಹಾಗಾಗಿ ನಾನೇ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಲು ಬಯಸಿದ್ದೆ" ಎಂದು ಹನ್ಸ್ ಹೇಳಿದರು.

ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಶೋಭಾ ಯಾತ್ರೆಯಲ್ಲಿ ಶನಿವಾರ ಸಂಜೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ನಾಗರಿಕ ಸೇರಿದಂತೆ 9 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿ ತಂದೆ!

ABOUT THE AUTHOR

...view details