ನೋಯ್ಡಾ:ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳ ದಾಳಿಗಳು ಮುಂದುವರೆದಿವೆ. ಮಾಜಿ ಐಪಿಎಸ್ ಅಧಿಕಾರಿ ರಾಮ್ ನಾರಾಯಣ್ ಸಿಂಗ್‌ಗೆ ಐಟಿ ಅಧಿಕಾರಿಗಳಿಂದು ಶಾಕ್ ನೀಡಿದ್ದಾರೆ.
ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಬೇಸ್‌ಮೆಂಟ್‌ನಲ್ಲಿ 1 ಕೋಟಿ ರೂಪಾಯಿ ನಗದನ್ನು ಪತ್ತೆ ಹಚ್ಚಿದ್ದಾರೆ. ನೋಯ್ಡಾ ಸೆಕ್ಟರ್ 50ರಲ್ಲಿ ಇರುವ ಮನೆಯಲ್ಲಿ ತೀವ್ರ ಶೋಧಕಾರ್ಯ ಮುಂದುವರೆದಿದೆ.
ಇದೇ ಮನೆಯ ಬೇಸ್‌ಮೆಂಟ್‌ನಲ್ಲೇ ರಾಮ್ ನಾರಾಯಣ್ ಸಿಂಗ್ ಕಂಪನಿಯೊಂದನ್ನು ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದ 650 ಲಾಕರ್‌ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆಂದು ಮೂಲಗಳು ತಿಳಿಸಿವೆ.
ದಾಳಿಗೆ ಸಂಬಂಧಿಸಿದಂತೆ ಈವರೆಗೆ ಯಾರ ವಿರುದ್ಧವೂ ಕೇಸ್ ದಾಖಲಾಗಿಲ್ಲ ಎಂದು ಐಟಿ ಮೂಲಗಳು ತಿಳಿಸಿವೆ. ಬೇನಾಮಿ ಆಸ್ತಿ ಏನಾದರೂ ಇದೆಯಾ? ಎಂಬುದರ ಬಗ್ಗೆಯೂ ಶೋಧ ಕಾರ್ಯ ಮುಂದುವರೆದಿದೆ. ಈವರೆಗೆ ವಶಕ್ಕೆ ಪಡೆದಿರುವ ಒಟ್ಟು ಹಣ, ವಸ್ತುಗಳು ಹಾಗೂ ದಾಖಲೆಗಳ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಇನ್ನಷ್ಟು ಮಾಹಿತಿ ನೀಡಬೇಕಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ