ಮುಂಬೈ (ಮಹರಾಷ್ಟ್ರ):ಕಳೆದ ಒಂದು ವರ್ಷದಿಂದ ಮಹಾರಾಷ್ಟ್ರ ರಾಜಕೀಯವು ಮಿಂಚಿನ ಬೆಳವಣಿಗೆಗಳು ಹಾಗೂ ನಾಟಕೀಯ ತಿರುವುಗಳು ಪಡೆದುಕೊಳ್ಳುತ್ತಿದೆ. ಶಿವಸೇನೆಯ ಏಕನಾಥ್ ಶಿಂಧೆ ಬಂಡಾಯ ಎದ್ದು ಬಿಜೆಪಿ ಜೊತೆ ಕೈಜೋಡಿಸಿದ್ದರು. ನಂತರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಮತ್ತು ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಏಕನಾಥ್ ಶಿಂಧೆ ಮುಖ್ಯಮಂತ್ರಿ ಹುದ್ದೆಗೇರಿದರು. ಇದೀಗ ಒಂದು ವರ್ಷದ ಬಳಿಕ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಮಾದರಿಯಲ್ಲೇ ಬಂಡಾಯದ ಬಾವುಟ ಹಾರಿಸಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಈ ಕ್ಷಿಪ್ರ ಬೆಳವಣಿಗೆ ಮಧ್ಯ ಈಗ ಮತ್ತೊಂದು ಸುದ್ದಿ ಮಹಾರಾಷ್ಟ್ರ ರಾಜಕೀಯದಲ್ಲಿ ಹರಿದಾಡುತ್ತಿದೆ.
2019ರ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಹಾಗೂ ಶಿವಸೇನೆ ನಡುವೆ ಅಧಿಕಾರ ಹಂಚಿಕೆ ವಿಷಯವಾಗಿ ಎರಡೂ ಪಕ್ಷಗಳ ಮೈತ್ರಿ ಮುರಿದು ಬಿದ್ದಿತ್ತು. ಬಳಿಕ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಸೇರಿ ಶಿವಸೇನೆ ಸರ್ಕಾರ ರಚನೆ ಮಾಡಿತ್ತು. ಈ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಎರಡೂವರೆ ವರ್ಷಗಳ ನಂತರ ಉದ್ಧವ್ ಠಾಕ್ರೆ ವಿರುದ್ಧವೇ ಸಚಿವರಾಗಿದ್ದ ಏಕನಾಥ್ ಶಿಂಧೆ 40 ಶಾಸಕರೊಂದಿಗೆ ಬಂಡಾಯ ಎದ್ದು, ಕಳೆದ ಒಂದು ವರ್ಷದಿಂದ ಬಿಜೆಪಿ ಜೊತೆಗೆ ಸರ್ಕಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಬಂಡಾಯ ಎದ್ದಿದ್ದಾರೆ. ಅವರ ಕೂಡ ಸುಮಾರು 30 ಶಾಸಕರೊಂದಿಗೆ ಸರ್ಕಾರವನ್ನು ಸೇರಿಕೊಂಡಿದ್ದಾರೆ. ಇದೀಗ ದಿಢೀರ್ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಸಹೋದರ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನ ಇಬ್ಬರು ಮುಖಂಡರು ಭೇಟಿಯಾಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.
ಒಂದಾಗ್ತಾರಾ ಠಾಕ್ರೆ ಸಹೋದರರು?: ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ಎಂಎನ್‌ಎಸ್ ಫಿಲ್ಮ್ ಸೇನಾ ನಾಯಕ ಅಭಿಜಿತ್ ಪನ್ಸೆ ಇಬ್ಬರು ಇದ್ದಕ್ಕಿದ್ದಂತೆ ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ. ಈ ಸಭೆಯ ಹಿಂದೆ ಠಾಕ್ರೆ ಸಹೋದರರಿಬ್ಬರು ಒಂದಾಗುವ ಪ್ರಸ್ತಾಪವಿದೆ ಎನ್ನಲಾಗುತ್ತಿದೆ. ಅಂದರೆ, ಶಿವಸೇನೆ ಮತ್ತು ಎಂಎನ್‌ಎಸ್ ಮೈತ್ರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಸಂಸದ ಸಂಜಯ್ ರಾವುತ್ ಅವರ ಭೇಟಿಯ ಹಿಂದೆ ತಮ್ಮ ವೈಯಕ್ತಿಕ ಕಾರಣಗಳಿವೆ ಎಂದು ಅಭಿಜಿತ್ ಪನ್ಸೆ ಹೇಳಿದ್ದಾರೆ. ಆದರೂ, ಭೇಟಿಯ ನಂತರ ನಡೆದ ಘಟನೆಗಳು ಮೈತ್ರಿ ಪ್ರಸ್ತಾಪದ ಬಗ್ಗೆ ಚರ್ಚೆಗಳನ್ನು ಹೆಚ್ಚಿಸಿದೆ. ಯಾಕೆಂದರೆ, ಇಬ್ಬರ ಸಭೆಯ ನಂತರ ಸಂಜಯ್ ರಾವುತ್ ನೇರವಾಗಿ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ತಲುಪಿದರು. ಅಭಿಜಿತ್ ಪಾನ್ಸೆ ರಾಜ್ ಠಾಕ್ರೆ ನಿವಾಸ ಶಿವತೀರ್ಥಕ್ಕೆ ತೆರಳಿದ್ದಾರೆ. ತಮ್ಮಿಬ್ಬರ ನಡುವೆ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಲು ಇಬ್ಬರೂ ನಾಯಕರು ತಮ್ಮ-ತಮ್ಮ ನಾಯಕರ ನಿವಾಸಗಳಿಗೆ ತೆರಳುವುದೇ ಗಮನ ಸೆಳೆಯುವಂತೆ ಮಾಡಿದೆ.