ನವದೆಹಲಿ:ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತರಾಗಿದ್ದು, ಇದಕ್ಕೆ ಇನ್ನಿಲ್ಲದ ವಿರೋಧ ವ್ಯಕ್ತವಾಗುತ್ತಿದೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೂಡ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಖಿಂಪುರ್ ಖೇರಿ ಹಿಂಸಾಚಾರ ಉಲ್ಲೇಖ ಮಾಡಿ ಮಾತನಾಡಿರುವ ಅಟಾರ್ನಿ ಜನರಲ್ ಕೆ. ವೇಣುಗೋಪಾಲ್, ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತಕ್ಷಣವೇ ನಿಲ್ಲಿಸಬೇಕು ಎಂದು ಪ್ರತಿಪಾದಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್, ಇಂತಹ ಅಹಿತಕರ ಘಟನೆ ನಡೆದಾಗ ಯಾರೂ ಕೂಡ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ನ ಎಎಮ್ ಖಾನ್ವಿಲ್ಕರ್ ನೇತೃತ್ವದ ಪೀಠಕ್ಕೆ ವೇಣುಗೋಪಾಲ್ ತಿಳಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆ ತಡೆಹಿಡಿದಿದೆ. ಈ ವೇಳೆ ರೈತರು ಪ್ರತಿಭಟನೆ ಯಾವುದಕ್ಕಾಗಿ ನಡೆಸುತ್ತಿದ್ದಾರೆ ಎಂದು ಹೇಳಿರುವ ಅವರು, ನ್ಯಾಯಾಲಯವು ಕಾಯ್ದೆಗಳ ಸಿಂಧುತ್ವ ನಿರ್ಣಯಿಸದೇ ಕೇಂದ್ರ ಸರ್ಕಾರ ಈ ಕಾಯ್ದೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ವಾದ ಆಲಿಸಿರುವ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆ ಅಕ್ಟೋಬರ್ 21ರಂದು ಮುಂದೂಡಿಕೆ ಮಾಡಿದೆ.