ಸ್ಟಾಕ್ಹೋಂ:ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಭೌತವಿಜ್ಞಾನಿಗಳಾದ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ಕ್ವಾಂಟಮ್ ಮಾಹಿತಿ ವಿಜ್ಞಾನದಲ್ಲಿನ ಕೆಲಸಕ್ಕಾಗಿ ಜಂಟಿಯಾಗಿ ನೀಡಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ಮಂಗಳವಾರ ಸ್ಟಾಕ್‌ಹೋಮ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜೇತರನ್ನು ಘೋಷಿಸಿದರು.
ಒಟ್ಟಿಗೆ ತಳಕು ಹಾಕಿಕೊಂಡಿರುವ ಫೋಟಾನ್‌ಗಳೊಂದಿಗಿನ ಪ್ರಯೋಗ ಹಾಗೂ ಕ್ವಾಂಟಮ್ ಮಾಹಿತಿ ವಿಜ್ಞಾನದ ವಿಷಯದಲ್ಲಿನ ಸಂಶೋಧನೆಗಾಗಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಎರಡು ಕಣಗಳು ಪ್ರತ್ಯೇಕಗೊಂಡಾಗಲೂ ಒಂದೇ ಘಟಕದಂತೆ ವರ್ತಿಸುವ ಕ್ವಾಂಟಮ್ ಮಾಹಿತಿ ವಿಜ್ಞಾನದ ಸ್ಥಿತಿಗಳನ್ನು ಬಳಸಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಮೂವರೂ ಪ್ರತ್ಯೇಕವಾಗಿ ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಅವರ ಫಲಿತಾಂಶಗಳು ಕ್ವಾಂಟಮ್ ಮಾಹಿತಿಯ ಆಧಾರದ ಮೇಲೆ ಹೊಸ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿವೆ.