ಅಲಹಾಬಾದ್: ಯಾವುದೇ ಸಂದರ್ಭದಲ್ಲಿಯೂ ಭಾರತೀಯ ಮಹಿಳೆ ತನ್ನ ಪತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪ್ರಕರಣವೊಂದರಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ವಾರಣಾಸಿಯ ನಿವಾಸಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾ.ರಾಹುಲ್ ಚತುರ್ವೇದಿ ಅವರು, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಿಡುಗಡೆ ಮಾಡುವಂತೆ ಮಾಡಿದ ಮನವಿಯನ್ನು ತಳ್ಳಿ ಹಾಕಿದರು.
ಆದೇಶಕ್ಕೆ ಕಾರಣವಾದ ಪ್ರಕರಣ: ಸುಶೀಲ್‌ಕುಮಾರ್ ಎಂಬಾತ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಾನೆ. ಆದರೆ, ಈತ ಮೂರನೇ ಮದುವೆಯಾಗಲಿದ್ದಾನೆ ಎಂದು ತಿಳಿದು ಆತನ ಎರಡನೇ ಪತ್ನಿ ಕಂಗಾಲಾಗಿದ್ದಳು. ಪತಿ ಮತ್ತು ಅತ್ತೆ 8-10 ವರ್ಷಗಳಿಂದ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೆಪ್ಟೆಂಬರ್ 22, 2018 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಮರುದಿನ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣದಿಂದ ನನ್ನನ್ನು ತೆಗೆದುಹಾಕುವಂತೆ ಕೋರಿ ಸುಶೀಲ್ ಕುಮಾರ್ ಡಿಸ್ಚಾರ್ಜ್ ಅರ್ಜಿಯನ್ನು ಸಲ್ಲಿಸಿದರು. ಆದರೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆ ಅರ್ಜಿಯನ್ನು ವಜಾಗೊಳಿಸಿದ್ದಾರೆ.