ನಾಗ್ಪುರ (ಮಹಾರಾಷ್ಟ್ರ): ಕಾಂಗ್ರೆಸ್ ಇಲ್ಲದೆ ಯಾವುದೇ ತೃತೀಯ ರಂಗದ ರಚನೆ ಇಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ರನ್ನು ಭೇಟಿ ಮಾಡಿದ ಒಂದು ದಿನದ ನಂತರ ಈ ಬಗ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷವನ್ನು ಈ ಕಣದಿಂದ ಹೊರಗಿಟ್ಟಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾವತ್, ಕಾಂಗ್ರೆಸ್ ಇಲ್ಲದೆ ಯಾವುದೇ ತೃತೀಯ ರಂಗ ನಿರ್ಮಾಣ ಮಾಡುತ್ತೇವೆ ಎಂದು ನಾವು ಎಂದಿಗೂ ಹೇಳಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಸಮಾನವಾಗಿ ಕಣಕ್ಕಿಳಿಸಬೇಕು. ನಾವು ಇದನ್ನು ಪದೇಪದೆ ಹೇಳುತ್ತಿದ್ದೇವೆ ಎಂದರು.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಎಲ್ಲರನ್ನು ಒಟ್ಟಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ತುಂಬಾ ಕಠಿಣ ಪರಿಶ್ರಮದ ನಾಯಕರಾಗಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಿದ್ದಾರೆ ಎಂದು ಹೊಗಳಿದರು.
ಇದನ್ನೂ ಓದಿ:ಸಿನಿಮೀಯ ಶೈಲಿಯಲ್ಲಿ ತಲ್ವಾರ್ ಹಿಡಿದು ಹಫ್ತಾ ವಸೂಲಿ : ವಿಡಿಯೋ ನೋಡಿ
20 ಫೆಬ್ರವರಿ, 2022ರಂದು ನಡೆದ ಅವರ ಸಭೆಯಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥರಾದ ರಾವ್ ಮತ್ತು ಶಿವಸೇನಾ ಅಧ್ಯಕ್ಷ ಠಾಕ್ರೆ ಅವರು ಅಭಿವೃದ್ಧಿ ಮತ್ತು ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಇಬ್ಬರು ಸಿಎಂಗಳು ಮತ್ತು ಇತರ ರಾಜಕೀಯ ನಾಯಕರು ಶೀಘ್ರದಲ್ಲೇ ಮತ್ತೆ ಭೇಟಿಯಾಗಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಯುಪಿ ಚುನಾವಣೆಯ ನಡುವೆ ಬಿಜೆಪಿ ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ಅದು ಅವರ ಅಭ್ಯಾಸ, ಅವರು ಸೋತಾಗ ಅಂತಹ ಹೇಳಿಕೆಗಳನ್ನು ನೀಡುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲುತ್ತಿದೆ ಎಂದು ಹೇಳಿದರು.