ಕೊರ್ಬಾ (ಛತ್ತೀಸ್‌ಗಢ): ಭಾರತ ವೈವಿಧ್ಯಮಯ ರಾಷ್ಟ್ರ. ಭಿನ್ನ, ವಿಭಿನ್ನ ಸಂಪ್ರದಾಯ, ಆಚರಣೆಗಳ ತವರು. ಇದರಲ್ಲಿ ವಿವಾಹ ಸಮಾರಂಭ ಕೂಡ ಒಂದು. ಪ್ರತಿಯೊಂದು ಸಮುದಾಯವು ತಮ್ಮದೇ ಸಂಪ್ರದಾಯ, ಪದ್ಧತಿಯ ಮದುವೆ ಕಾರ್ಯಕ್ರಮ ಹೊಂದಿರುವುದು ವಿಶೇಷ. ಇಂತಹವೊಂದು ವಿಭಿನ್ನ ಸಂಪ್ರದಾಯದ ಮದುವೆ ಪದ್ಧತಿ ಛತ್ತೀಸ್‌ಗಢದಲ್ಲಿ ಆಚರಣೆಯಲ್ಲಿದೆ.
ಹೌದು, ಕೊರ್ಬಾ ಜಿಲ್ಲೆಯ ಸನ್ವಾರ ಎಂಬ ಬುಡಕಟ್ಟು ಜನಾಂಗವು ಮದುವೆ ಸಮಾರಂಭದ ವೇಳೆ ವರದಕ್ಷಿಣೆಯಾಗಿ ಹಾವುಗಳು ನೀಡಲಾಗುತ್ತದೆ. ವಧುವಿನ ಕಡೆಯಿಂದ ವರನಿಗೆ ಹಾವುಗಳು ವರದಕ್ಷಿಣೆಯಾಗಿ ನೀಡದಿದ್ದರೆ, ಅವರ ವಿವಾಹ ಸಮಾರಂಭವು ಅಪೂರ್ಣ ಎಂಬ ಬಲವಾದ ನಂಬಿಕೆ ಈ ಬುಡಕಟ್ಟು ಜನಾಂಗದ್ದು.
ಯಾಕೆಂದರೆ, ಬುಡಕಟ್ಟು ಸಮುದಾಯದವರು ಹಾವಾಡಿಗರು. ಹಾವು ಆಡಿಸುವುದೇ ಇವರ ಜೀವನಕ್ಕೆ ಆಧಾರ. ವರದಕ್ಷಿಣೆಯಾಗಿ ಹುಡುಗನಿಗೆ ಹಾವು ಉಡುಗೊರೆ ನೀಡಿದರೆ, ಅದರಿಂದಲೇ ಆತ ಮುಂದಿನ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಪೂರ್ವಜರ ಕಾಲದಿಂದಲೂ ನಂಬಿಕೊಂಡು ಬಂದಿದ್ದಾರೆ.
ಕೊರ್ಕೊಮಾ ಮತ್ತು ಸಂವಾರ ಬುಡಕಟ್ಟಿನ ಜನರು ಇಲ್ಲಿನ ಮುಕುಂದಪುರ ಮತ್ತು ಸೊಹಗ್‌ಪುರ ಗ್ರಾಮ ಪಂಚಾಯಿತಿಗಳ ಸುತ್ತಲೂ ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಹಾವಾಡಿಗ ಸಮುದಾಯಕ್ಕೆ ಸೇರಿದ ಸುಮಾರು 100 ಕುಟುಂಬಗಳಿವೆ. ಕೆಲವರು ಜಶ್ಪುರ ಮತ್ತು ಇತರ ಸ್ಥಳಗಳಿಂದ ವಲಸೆ ಬಂದ ನಂತರ ಇಲ್ಲಿಗೆ ನೆಲೆಸಿದ್ದಾರೆ. ಹಳೆಯ ಬಟ್ಟೆಯಿಂದ ಗುಡಿಸಲು ಕಟ್ಟಿಕೊಂಡು ಇವರು ಜೀವನ ಸಾಗಿಸುತ್ತಿದ್ದಾರೆ.
ತಲೆಮಾರುಗಳ ಸಂಪ್ರದಾಯ:ಸನ್ವಾರ ಬುಡಕಟ್ಟಿನ ಜನರು ತಲೆಮಾರುಗಳಿಂದ ಹಾವುಗಳನ್ನು ಆಡಿಸುವುದೇ ಕಾಯಕವಾಗಿದೆ. ಆ ಕಾಲದಿಂದಲೇ ಮದುವೆಯಲ್ಲಿ ವರದಕ್ಷಿಣೆಯಾಗಿ ಹಾವು ನೀಡುವ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ನಾಗದೇವರ ದರ್ಶನ ಪಡೆದು ಹಣ ಕೇಳುವ ಈ ಪದ್ಧತಿ ಕೂಡ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಸಮುದಾಯದವರು.
ವರದಕ್ಷಿಣೆಯಲ್ಲಿ ನಾಗರಹಾವು ನೀಡುವ ಸಂಪ್ರದಾಯ ವಿಶಿಷ್ಟವಾಗಿರುವುದು ಮಾತ್ರವಲ್ಲದೆ ಮದುವೆಯಲ್ಲಿ ವಿವಿಧ ಜಾತಿಯ 9 ಬಗೆಯ ಹಾವುಗಳನ್ನು ನೀಡಲಾಗುತ್ತದೆ. ಇಷ್ಟು ಬಗೆಯ ಹಾವುಗಳನ್ನು ಹೊಂದಿರುವವರು ಸುಭಿಕ್ಷವಾಗಿರುತ್ತಾರೆ. ಈಗಲೂ ನಾವು ಇದೇ ರೀತಿ ಮದುವೆಯ ವಿಧಿವಿಧಾನಗಳನ್ನು ಪೂರೈಸುತ್ತೇವೆ. ನಾನು ಚಿಕ್ಕಂದಿನಿಂದಲೂ ಹಾವುಗಳೊಂದಿಗೆ ಆಟವಾಡುತ್ತಿದ್ದೆ. ಈ ಹಾವುಗಳನ್ನು ಜನರಿಗೆ ತೋರಿಸುವ ಮೂಲಕ ನಮ್ಮ ಜೀವನ ಸಾಗುತ್ತಿದೆ ಎಂದು 60 ವರ್ಷದ ಭರತ್ ಲಾಲ್ ತಿಳಿಸಿದ್ದಾರೆ.
ಮದುವೆಯ ಸಮಯದಲ್ಲಿ ನಾವು ಹಾವುಗಳನ್ನು ವರದಕ್ಷಿಣೆಯಾಗಿ ನೀಡಿದ್ದೆರೆ ಮದುವೆಯ ಆಚರಣೆಗಳು ಮತ್ತು ಸಂಪ್ರದಾಯಗಳು ಪೂರ್ಣವಾಗುವುದಿಲ್ಲ. ಆಗಿನ ಕಾಲದಲ್ಲಿ 60 ಹಾವುಗಳನ್ನು ವರನಿಗೆ ಕೊಡಲಾಗುತ್ತಿತ್ತು. ಆದರೆ, ಕಾಲ ಬದಲಾದಂತೆ ಮತ್ತು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಈಗ 9 ಹಾವುಗಳನ್ನು ಮಾತ್ರ ನೀಡಲಾಗುತ್ತದೆ ಎಂದು ತೇಜ್ರಾಮ್ ಹೇಳಿದ್ದಾರೆ.
ಸಂವಾರ ಬುಡಕಟ್ಟಿನ ಬಹುಪಾಲು ಜನರು ಇಂದಿಗೂ ಹಳೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ. ಈಗ ಅರಣ್ಯ ಇಲಾಖೆಯ ನಿಯಮಗಳು ಹಾಗೂ ಪ್ರಾಣಿ ಸಂರಕ್ಷಣಾ ಕಾಯ್ದೆಗಳು ಈ ರೀತಿ ರಿವಾಜುಗಳಿಗೆ ಅಡ್ಡಿಯಾಗುತ್ತಿವೆ. ಈ ಬಗ್ಗೆ ಆದಷ್ಟು ಜನರಿಗೆ ಸಲಹೆ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಚಿಂತಪಲ್ಲಿ ಅರಣ್ಯದಲ್ಲಿದ್ದಾರೆ ಶ್ರೀರಾಮ - ಲಕ್ಷ್ಮಣ: ಇವರೇ ಬುಡಕಟ್ಟು ಜನರ ಆರಾಧ್ಯ ದೈವ!