ನವದೆಹಲಿ:ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲದ ಕಾರಣ ದಾಳಿಯ ಸಮಯದಲ್ಲಿ ಧ್ವಂಸಗೊಂಡ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಜಗ್ಗಿ ವಾಸುದೇವ್ ಸದ್ಗುರು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಮತ್ತೆ ಬರೆಯಲು ಅಸಾಧ್ಯ. ಈ ಹಿಂದೆ ನಡೆದ ಆಕ್ರಮಣಗಳ ಸಂದರ್ಭದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳನ್ನು ಈಗ ಮರುನಿರ್ಮಾಣ, ಪತ್ತೆ ಮಾಡುವ ಕೆಲಸ ಅರ್ಥವಿಲ್ಲದ್ದು, ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ. ಆಗ ನಾವು ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಆ ವಿಷಯಗಳನ್ನು ಕೆದಕುವುದು ತಕ್ಕುದಲ್ಲ. ಎರಡು ಸಮುದಾಯಗಳು ಒಟ್ಟಿಗೆ ಕುಳಿತು ಈ ವಿಷಯದ ಬಗ್ಗೆ ಇತ್ಯರ್ಥಪಡಿಸಿಕೊಳ್ಳಬೇಕು. ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿಡಬಾರದು. ಕೊಡು ಮತ್ತು ತೆಗೆದುಕೊಳ್ಳುವಿಕೆಯಿಂದ ರಾಷ್ಟ್ರ ನಿರ್ಮಾಣದ ಮುಂದಿನ ದಾರಿ ಹುಡುಕಬೇಕಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಈ ಸಮಯದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಈ ಹಂತದಲ್ಲಿ ನಾವು ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಅದನ್ನು ಬಿಟ್ಟು ಕೆಲ ವಿಚಾರಗಳಿಗೆ ದೊಡ್ಡ ವಿವಾದ ಸೃಷ್ಟಿಸಿ ಅದನ್ನು ಹಾಳು ಮಾಡಬಾರದು. ಮಸೀದಿ- ಮಂದಿರಗಳ ವಿಚಾರ ವಿವಾದಾತ್ಮಕಗೊಳಿಸಬೇಡಿ ಎಂದು ಮನವಿ ಮಾಡಿದರು.
ಓದಿ:ಗೋವಾದಲ್ಲಿ ಪೋರ್ಚುಗೀಸ್ ದಾಳಿಯಿಂದ ಹಾಳಾದ ದೇವಾಲಯಗಳ ಪುನರ್ನಿರ್ಮಾಣ: ಸಿಎಂ ಸಾವಂತ್