ಶ್ರೀನಗರ (ಜಮ್ಮುಕಾಶ್ಮೀರ): ಕಲ್ಲು ತೂರಾಟ ಹಾಗೂ ಇತರೆ ದೇಶ ವಿರೋಧಿ ಕೃತ್ಯಗಳಲ್ಲಿ ತೊಡುಗುವವರಿಗೆ ಪಾಸ್ಪೋರ್ಟ್, ಸರ್ಕಾರಿ ಉದ್ಯೋಗ ಹಾಗೂ ಇತರೆ ಭದ್ರತಾ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಕುರಿತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ), ಅಪರಾಧ ತನಿಖಾ ಇಲಾಖೆ (ಸಿಐಡಿ) ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಯಾವುದೇ ಸರ್ಕಾರಿ ಉದ್ಯೋಗ, ಪಾಸ್ಪೋರ್ಟ್ ಪಡೆಯಬೇಕೆಂದರೆ, ಜಮ್ಮುಕಾಶ್ಮೀರ ಪೊಲೀಸರ ಅನುಮತಿ ಕಡ್ಡಾಯವಾಗಿರುತ್ತದೆ. ವ್ಯಕ್ತಿಯು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಅವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುವುದಿಲ್ಲ. ದುಷ್ಕೃತ್ಯಗಳ ಬಗ್ಗೆ ಕೇವಲ ಪೊಲೀಸರಷ್ಟೇ ಅಲ್ಲದೆ, ಭದ್ರತಾ ಏಜೆನ್ಸಿ, ಭದ್ರತಾ ಪಡೆಗಳು ಸಾಕ್ಷ್ಯ ನೀಡಬಹುದು. ಸಿಸಿಟಿವಿ ದೃಶ್ಯಾವಳಿ, ವಿಡಿಯೋ, ಆಡಿಯೋ ಹಾಗೂ ಇನ್ನಿತರ ಡಿಜಿಟಲ್ ಪುರಾವೆಗಳಿದ್ದರೆ, ಅವುಗಳನ್ನು ಪೊಲೀಸರಿಗೆ ನೀಡಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.