ದೆಹಲಿ: ಭಾರತೀಯರಿಗೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮತ್ತಷ್ಟು ಆತಂಕ ಸೃಷ್ಟಿಸಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಒತ್ತೆ ಇಟ್ಟುಕೊಂಡಿರುವುದು ಮತ್ತು ಅವರಿಗೆ ಥಳಿಸಲಾಗಿದೆ ಎಂಬ ವರದಿ ಬರುತ್ತಿದೆ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಮಾನವ ಗುರಾಣಿಯಾಗಿ ಬಳಕೆ ಮಾಡುತ್ತಿದೆ ಎಂದು ಖುದ್ದು ರಷ್ಯಾ ಆರೋಪಿಸಿದೆ. ಆದರೆ, ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್ ಭದ್ರತಾ ಪಡೆಗಳು ಒತ್ತೆಯಾಗಿರಿಸಿಕೊಂಡಿವೆ. ಅವರನ್ನು ಮಾನವ ಗುರಾಣಿಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ದೂರಿದೆ. ಕಳೆದ ರಾತ್ರಿಯಷ್ಟೇ ಪ್ರಧಾನಿ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಉಕ್ರೇನ್, ಅದರಲ್ಲೂ ಖಾರ್ಕಿವ್ ಪರಿಸ್ಥಿತಿ ಮತ್ತು ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಇಂತಹ ಆರೋಪವನ್ನು ರಷ್ಯಾ ಮಾಡಿದೆ.
ರಷ್ಯಾ ಹೇಳಿದ್ದೇನು?: ಸದ್ಯ ಮಾಹಿತಿ ಪ್ರಕಾರ ಉಕ್ರೇನ್-ಪೋಲಿಷ್ ಗಡಿಯಲ್ಲಿ ಭಾರತೀಯರ ವಿದ್ಯಾರ್ಥಿಗಳನ್ನು ಉಕ್ರೇನ್ ಭದ್ರತಾ ಪಡೆ ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅವರನ್ನು ಮಾನವ ಗುರಾಣಿಯಾಗಿ ಬಳಕೆ ಮಾಡುತ್ತಿದೆ. ರಷ್ಯಾಕ್ಕೆ ಬರುವುದನ್ನು ತಡೆಯಲೆಂದೇ ಇದನ್ನು ಮಾಡಲಾಗುತ್ತಿದೆ. ಆದರೂ, ಭಾರತೀಯರ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ರಷ್ಯಾ ಸೇನೆಯು ತೆಗೆದುಕೊಳ್ಳಲಿದೆ. ಅವರನ್ನು ತಮ್ಮ ಮನೆಗಳಿಗೆ ರಷ್ಯಾದ ಸೇನಾ ವಿಮಾನಗಳು ಅಥವಾ ಭಾರತೀಯ ವಿಮಾನಗಳ ಮೂಲಕ ಕಳುಹಿಸಿಕೊಡಲು ಸಿದ್ಧ ಇರುವುದಾಗಿ ರಷ್ಯಾದ ರಾಯಭಾರಿ ಟ್ವೀಟ್ ಮಾಡಿದ್ದಾರೆ.