ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ರಿಲೀಫ್ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ದೆಹಲಿ ಹೈಕೋರ್ಟ್‌ಗೆ ಹೋಗುವಂತೆ ಸಿಸೋಡಿಯಾಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ನರಸಿಂಹ ಅವರಿದ್ದ ದ್ವಿಸದಸ್ಯ ಪೀಠವು ಈ ಸಲಹೆ ನೀಡಿತು. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸೇರಿದಂತೆ ವಿವಿಧ ವಿಷಯಗಳ ವಿವಿಧ ಕಾನೂನು ಪರಿಹಾರ ಲಭ್ಯವಿದೆ. ಈ ವಿಷಯದಲ್ಲಿ ನಾವು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ಘಟನೆ ನಡೆದ ಮಾತ್ರಕ್ಕೆ ವಿಷಯವು ಸುಪ್ರೀಂ ಕೋರ್ಟ್‌ಗೆ ಬರುತ್ತದೆ ಎಂದು ಅರ್ಥವಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.
ಇದನ್ನೂ ಓದಿ:5 ದಿನ ಸಿಬಿಐ ಕಸ್ಟಡಿಗೆ ದೆಹಲಿ ಸಚಿವ ಮನೀಶ್ ಸಿಸೋಡಿಯಾ; ಆಪ್ನಿಂದ ತೀವ್ರ ಪ್ರತಿಭಟನೆ
ಸುಪ್ರೀಂ ಕೋರ್ಟ್ನಿಂದ ಕೋರುತ್ತಿರುವ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯ ಅಥವಾ ದೆಹಲಿ ಹೈಕೋರ್ಟ್‌ಗಳನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿತು. ಈ ಮೂಲಕ ಎಫ್‌ಐಆರ್ ರದ್ದುಗೊಳಿಸುವಂತೆ ಅಥವಾ ಸಿಬಿಐ ಕಸ್ಟಡಿಯಿಂದ ಜಾಮೀನು ನೀಡುವಂತೆ ಸಿಸೋಡಿಯಾ ಮಾಡಿದ ಮನವಿ ಪರಿಗಣಿಸಲು ಕೋರ್ಟ್ ನಿರಾಕರಿಸಿತು. ಈ ವೇಳೆ ಸಿಸೋಡಿಯಾ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಕನಿಷ್ಠ ಪಕ್ಷ ವಿಚಾರಣೆ ತ್ವರಿತಗೊಳಿಸಲು ಕೆಳ ಹಂತದ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ, ಅರ್ಜಿ ಹಿಂಪಡೆದರು. ಸುಪ್ರೀಂ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ, ದೆಹಲಿ ಹೈಕೋರ್ಟ್‌ಗೆ ಹೋಗಲು ಆಮ್ ಆದ್ಮಿ ಪಕ್ಷವು ಸಿದ್ಧವಿದೆ ಎಂದು ಆ ಪಕ್ಷ ತಿಳಿಸಿದೆ.
ಮಂಗಳವಾರ ಬೆಳಗ್ಗೆಯಷ್ಟೇ ಸಿಸೋಡಿಯಾ ಸಿಬಿಐಯಿಂದ ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ತಕ್ಷಣ ವಿಚಾರಣೆಗೆ ಮನವಿ ಮಾಡಿದ್ದರಿಂದ, ನ್ಯಾಯಾಲಯವು ಬೆಳಗ್ಗೆ ಅಂಗೀಕರಿಸಿತ್ತು. ಮಧ್ಯಾಹ್ನ 3.50ಕ್ಕೆ ವಿಚಾರಣೆ ನಿಗದಿಯಾಗಿತ್ತು. ಆದರೆ, ಪಂಜಾಬ್‌ನ ಬಜೆಟ್ ಅಧಿವೇಶನದ ಕುರಿತಾದ ವಿಚಾರಣೆಯಿಂದಾಗಿ ಒಂದು ಗಂಟೆ ತಡವಾಗಿ ಅರ್ಜಿಯನ್ನು ಸುಪ್ರೀಂ ಕೈಗೆತ್ತಿಕೊಂಡಿತ್ತು. ಮತ್ತೊಂದೆಡೆ, ಫೆ.26ರಂದು ಸಿಸೋಡಿಯಾರನ್ನು ಬಂಧಿಸಿರುವ ಸಿಬಿಐ ಐದು ದಿನಗಳ ಕಾಲ ತನ್ನ ಕಸ್ಟಡಿಗೆ ಪಡೆದಿದೆ. ಮಂಗಳವಾರದಿಂದಲೇ ಹೆಚ್ಚಿನ ವಿಚಾರಣೆ ಆರಂಭಿಸಿದೆ.
ಸಿಸೋಡಿಯಾ ವಿರುದ್ಧದ ಆರೋಪಗಳೇನು? : ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ನೀತಿಯನ್ನು ಸರ್ಕಾರ ಈಗಾಗಲೇ ರದ್ದು ಮಾಡಿದೆ. ಆದರೆ, ಹಗರಣ ಕುರಿತಂತೆ ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಹಾಗೂ ವಿರೂಪಗೊಳಿಸಿದ ಆರೋಪದ ಮೇಲೆ ಡಿಸಿಎಂ ಮನೀಶ್ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ.
ಎರಡೂ ತನಿಖಾ ಸಂಸ್ಥೆಗಳು ಈಗಾಗಲೇ ತಮ್ಮ ಪ್ರಾಥಮಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ. ಈ ಪ್ರಕರಣದ ಹೆಸರು ಕೇಳಿ ಬಂದ ಇತರ ಆರೋಪಿಗಳಾದ ವಿಜಯ್ ನಾಯರ್, ಸಮೀರ್ ಮಹೇಂದ್ರು, ವಿನಯ್ ಬಾಬು, ಶರತ್ ರೆಡ್ಡಿ, ಅಭಿಷೇಕ್ ಬೋಯಿನಪಲ್ಲಿ, ಅಮಿತ್ ಅರೋರಾ, ರಾಜೇಶ್ ಜೋಶಿ ಹಾಗೂ ಆಂಧ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಸಂಸದ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ್ ಮಾಗುಂಟಾ ಅವರನ್ನು ತನಿಖಾ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ:ಅಬಕಾರಿ ಹಗರಣ.. ಸಿಬಿಐ ಅಧಿಕಾರಿಗಳಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅರೆಸ್ಟ್