ನವದೆಹಲಿ:ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಮರುಜನ್ಮಕ್ಕೆ ಶತಪ್ರಯತ್ನ ಮಾಡಲಾಗುತ್ತಿದೆ. ಈ ನಡುವೆ ಕಳೆದ 6 ತಿಂಗಳಲ್ಲಿ 6 ಚೀತಾಗಳು ಸಾವನ್ನಪ್ಪಿವೆ. ಇಲ್ಲಿಯೇ ಜನಿಸಿದ 3 ಮರಿಗಳು ಅಸುನೀಗಿವೆ. ಮಾಧ್ಯಮಗಳಲ್ಲಿ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಸರ್ಕಾರ ನೀಡಿದ ಮಾಹಿತಿಯಲ್ಲಿ ಸುಳ್ಳು ಕಾಣುತ್ತಿಲ್ಲ ಎಂದು ಇದೇ ವೇಳೆ ಕೋರ್ಟ್ ಪ್ರತಿಕ್ರಿಯಿಸಿತು.
ಆಫ್ರಿಕಾದಿಂದ ಎರವಲು ತಂದಿರುವ ಚೀತಾಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಅವುಗಳು ಸಾವನ್ನಪ್ಪುತ್ತಿವೆ ಎಂದು ದೂರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ, ಈ ಬಗ್ಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಇಂದು ಕೇಂದ್ರ ಅಫಿಡವಿಟ್ ಸಲ್ಲಿಸಿದೆ.
ಅಫಿಡವಿಟ್ನಲ್ಲಿರುವ ಅಂಶಗಳು:ಚಿರತೆಗಳ ಸಾವು ತಡೆಯಲು ಅತ್ಯುತ್ತಮ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆದಾಗ್ಯೂ ಕಾರಣಾಂತರಗಳಿಂದ ಭಾರತಕ್ಕೆ ತಂದ 20 ಚೀತಾಗಳಲ್ಲಿ 6 ಸಾವನ್ನಪ್ಪಿ, 14 ಉಳಿದುಕೊಂಡಿವೆ. ದೇಶಕ್ಕೆ ತಂದ ಮೇಲೆ ಇಲ್ಲಿಯೇ ಹೆಣ್ಣು ಚೀತಾಗೆ ಜನಿಸಿದ್ದ 3 ಮರಿಗಳ ಸಾವಾಗಿದೆ. ಚಿರತೆಗಳ ಉಳಿವಿಗಾಗಿ ಚಿರತೆ ತಜ್ಞರ ಅಂತಾರಾಷ್ಟ್ರೀಯ ಸಮಿತಿಯ ಜೊತೆಗೆ 11 ತಜ್ಞರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ ಎಂದು ಕೇಂದ್ರ ಹೇಳಿದೆ.