ಕರ್ನಾಟಕ

karnataka

ETV Bharat / bharat

ಅಗ್ನಿಪಥ್​ ಯೋಜನೆ ಹಿಂಪಡೆವ ಮಾತೇ ಇಲ್ಲ, ಇದು ದಶಕಗಳ ಚಿಂತನೆಯ ಫಲ: ಅಜಿತ್​ ದೋವಲ್​

ರಕ್ಷಣಾ ಸಚಿವಾಲಯ ಜಾರಿ ಮಾಡಿರುವ ಅಗ್ನಿಪಥ್​ ಯೋಜನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ಹಿಂಪಡೆಯಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಆದರೆ, ಯೋಜನೆ ಪ್ರಭಾವಿ, ಮಹತ್ವಾಕಾಂಕ್ಷಿಯಾಗಿದೆ. ಅದನ್ನು ವಾಪಾಸ್​ ಪಡೆಯುವ ಮಾತೇ ಇಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಹೇಳಿದ್ದಾರೆ.

ಇದು ದಶಕಗಳ ಚಿಂತನೆಯ ಫಲ: ಅಜಿತ್​ ದೋವಲ್​
ಇದು ದಶಕಗಳ ಚಿಂತನೆಯ ಫಲ: ಅಜಿತ್​ ದೋವಲ್​

By

Published : Jun 21, 2022, 3:47 PM IST

Updated : Jun 21, 2022, 5:18 PM IST

ನವದೆಹಲಿ:ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ 'ಅಗ್ನಿವೀರ'ರನ್ನು ನೇಮಿಸಿಕೊಳ್ಳುವ 'ಅಗ್ನಿಪಥ್​ ಯೋಜನೆ'ಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಖಂಡತುಂಡವಾಗಿ ಹೇಳಿದ್ದಾರೆ. ಅಲ್ಲದೇ ಇದು ರಾತ್ರೋರಾತ್ರಿ ನಿರ್ಣಯಿಸಿ ಘೋಷಿಸಿದ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಗ್ನಿಪಥ್​ ಯೋಜನೆಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಈ ಯೋಜನೆಯನ್ನು ಜಾರಿ ಮಾಡಲು ದಶಕಗಳಿಂದ ಚರ್ಚಿಸಲಾಗಿದೆ. ಹಲವಾರು ಸಮಿತಿಗಳು ಸಶಸ್ತ್ರ ಪಡೆಗಳ ಸರಾಸರಿ ವಯಸ್ಸನ್ನು ಕಡಿಮೆ ಮಾಡಲು ಸಲಹೆ ನೀಡಿವೆ ಎಂದು ಹೇಳಿದರು.

ಅಗ್ನಿಪಥ್ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದನ್ನು ರಾತ್ರಿ ಕುಳಿತು ಮಾತನಾಡಿ ಬೆಳಗಾಗುವುದರೊಳಗೆ ಘೋಷಿಸಿಲ್ಲ. ಇದು ದಶಕಗಳ ಕಾಲ ಚರ್ಚಿಸಿ, ಹಲವಾರು ತಜ್ಞರ ಸಲಹೆಯ ಆಧಾರದ ಮೇಲೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ದೇಶ ಸೇವೆಗೆ ಪ್ರೇರಣೆ:ದೇಶ ಸೇವೆ ಮಾಡುವ ಪ್ರತಿಯೊಬ್ಬ ಯುವಕನ ಬಯಕೆಗೆ ಈ ಯೋಜನೆ ಪ್ರೇರಣೆ ನೀಡುತ್ತದೆ. ದೇಶವನ್ನು ರಕ್ಷಿಸುವ ಬದ್ಧತೆಯ ಭಾವವನ್ನು ಯುವಕರು ಹೊಂದಲಿದ್ದಾರೆ. ಅವರ ಶಕ್ತಿ ಮತ್ತು ಪ್ರತಿಭೆ ಈ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬಳಸಿಕೊಳ್ಳಲಾಗುತ್ತದೆ.

ಸೇನೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸುಧಾರಣೆಯನ್ನು ಅಗ್ನಿಪಥ್‌ನಂತಹ ಯೋಜನೆಯ ರೂಪದಲ್ಲಿ ಹೊಂದಬಹುದು. ಇದರೊಂದಿಗೆ ಸೇನೆಯಲ್ಲಿ ಬಿಸಿರಕ್ತದ ಯುವಕರು ಮತ್ತು ಅನುಭವಿಗಳನ್ನು ತರಲು ಬಯಸುತ್ತೇವೆ. ಸೇನೆಯಲ್ಲಿ ಸರಾಸರಿ 30ರ ವಯಸ್ಸಿನ ಜವಾನರಿದ್ದಾರೆ. ಇದನ್ನು ಇನ್ನಷ್ಟು ಇಳಿಕೆ ಮಾಡಿ ಸೇನೆಗೆ ನವಚೇತನ ತರುವ ಪ್ರಯತ್ನ ಇದಾಗಿದೆ ಎಂದು ದೋವಾಲ್‌ ವಿವರಿಸಿದರು.

ಇದೇ ಕೊನೆಯಲ್ಲ, ಮತ್ತೆ ತರಬೇತಿ:ಅಗ್ನಿಪಥ್​ ಯೋಜನೆಯಡಿ ಆಯ್ಕೆಯಾದ ಅಗ್ನಿವೀರರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಅವರು ಸೇನೆಗೆ ಸೇರಿದ ಮೇಲೆ ಇನ್ನಷ್ಟು ಕಠಿಣ ತರಬೇತಿ ನೀಡಲಾಗುತ್ತದೆ. ಇದು ಅವರನ್ನು ಪರಿಪೂರ್ಣ ಯೋಧನನ್ನಾಗಿ ಮಾಡುತ್ತದೆ. ರೆಜಿಮೆಂಟ್‌ಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಹಾಗಾಗಿ ಅಗ್ನಿಪಥ್ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು.

ಇದನ್ನೂ ಓದಿ:ಅಗ್ನಿಪಥ: 'ಮೊದಲು ನಮ್ಮ ವಾದ ಆಲಿಸಿ' - ಸುಪ್ರೀಂಗೆ ಕೇಂದ್ರದ ಅಹವಾಲು

Last Updated : Jun 21, 2022, 5:18 PM IST

ABOUT THE AUTHOR

...view details