ನವದೆಹಲಿ: ಲಂಡನ್ಗೆ ಪ್ರಯಾಣಿಸುವ ಲಸಿಕೆ ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಕ್ವಾರಂಟೈನ್ಗೆ ಒಳಪಡುವ ಅಗತ್ಯ ಇಲ್ಲ ಯುಕೆ ಹೈಕಮಿಷನ್ ವಕ್ತಾರರು ಪ್ರಕಟಿಸಿದ್ದಾರೆ.
ಎರಡು ಡೋಸ್ ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದು ಯುಕೆಗೆ ಆಗಮಿಸುವ ಭಾರತೀಯರಿಗೆ ಯಾವುದೇ ಕ್ವಾರಂಟೈನ್ ಇಲ್ಲ. ಇದು ಅಕ್ಟೋಬರ್ 11 ರಿಂದ ಜಾರಿಗೆ ಬರಲಿದೆ. ಕಳೆದ ತಿಂಗಳಿಂದ ಸಹಕರಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ ಎಂದು ಬ್ರಿಟಿಷ್ ಹೈಕಮಿಷನ್ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಅ.11ರ ಮುಂಚೆ ಮತ್ತು ಲಸಿಕೆ ಪಡೆಯದ ಪ್ರಯಾಣಿಕರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅ.11 ರಿಂದ ಲಸಿಕಾ ಪ್ರಮಾಣ ಪತ್ರ ವ್ಯವಸ್ಥೆ ಪರಿಗಣಿಸಲಾಗುತ್ತದೆ. ಆರೋಗ್ಯ ಅಂಶ ಪರಿಗಣಿಸಿ ನಮ್ಮ ಸಚಿವಾಲಯಗಳ ನಡುವಿನ ನಿಕಟ ತಾಂತ್ರಿಕ ಸಹಕಾರದ ನಂತರ ಈ ನಿರ್ಧಾರ ಪ್ರಕಟಿಸಿದ್ದೇವೆ ಎಂದು ಭಾರತದ ಬ್ರಿಟಿಷ್ ಹೈ ಕಮಿಷನ್ ತಿಳಿಸಿದ್ದಾರೆ.
ಲಸಿಕೆ ಪ್ರಮಾಣೀಕರಣದ ವಿಸ್ತರಣೆಯು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮೂಲಕ ಸುರಕ್ಷತೆ ಮತ್ತು ಸುಸ್ಥಿರ ರೀತಿಯಲ್ಲಿ ಜನರು ಮತ್ತೊಮ್ಮೆ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಒಂದು ಮುಂದಿನ ಹೆಜ್ಜೆಯಾಗಿದೆ" ಎಂದು ವಕ್ತಾರರು ಹೇಳಿದರು.
ಎರಡು ಡೋಸ್ ಪಡೆದ ಭಾರತೀಯ ಪ್ರಯಾಣಿಕರು ಯುಕೆಗೆ ಬರುವ 14 ದಿನಗಳ ಮುನ್ನ ಕ್ವಾರಂಟೈನ್ ಮಾಡದೇ ಪ್ರಯಾಣಿಸಬಹುದು. ಪೂರ್ವ-ನಿರ್ಗಮನ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲ ಅಥವಾ ಆಗಮನದ ನಂತರ 8ನೇ ದಿನ ಪರೀಕ್ಷೆ ತೆಗೆದುಕೊಳ್ಳಬೇಕಿಲ್ಲ.