ಕೃಷ್ಣಗಿರಿ(ತಮಿಳುನಾಡು): ಕೃಷ್ಣಗಿರಿ ಜಿಲ್ಲೆಯ ವೇಲಂಪಟ್ಟಿಯಲ್ಲಿ ಯೋಧ ಪ್ರಭು ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಚಿನ್ನಸ್ವಾಮಿ ಡಿಎಂಕೆ ಪಕ್ಷಕ್ಕೆ ಸೇರಿದ್ದು, ಹೀಗಾಗಿ ಕೊಲೆಯಲ್ಲಿ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಬಗ್ಗೆ ಜಿಲ್ಲಾ ಎಸ್ಪಿ ಸರೋಜ್ ಕುಮಾರ್ ಠಾಕೂರ್ ಪ್ರತಿಕ್ರಿಯಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಕುಮ್ಮಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಯೋಧ ಹುತಾತ್ಮರಾಗಿರುವುದು ಬೇಸರ ತಂದಿದೆ. ಈ ಪ್ರಕರಣದಲ್ಲಿ ಹತ್ಯೆಯಾದ ಯೋಧ ಪ್ರಭು ಮತ್ತು ಆರೋಪಿ ಚಿನ್ನಸ್ವಾಮಿ ಹತ್ತಿರದ ಸಂಬಂಧಿಗಳಾಗಿದ್ದರು. ಅವರ ನಡುವೆ ಇದ್ದ ಮನಸ್ತಾಪ ಕೊಲೆಗೆ ಕಾರಣವಾಗಿದೆ. ಬದಲಾಗಿ ಯಾವುದೇ ರಾಜಕೀಯ ಉದ್ದೇಶ ಇಲ್ಲ" ಎಂದು ತಿಳಿಸಿದ್ದಾರೆ.
ಮುಂದುವರಿದು "ಫೆಬ್ರವರಿ 8 ರಂದು ಸಾರ್ವಜನಿಕ ನೀರಿನ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿತ್ತು. ನಂತರ ಚಿನ್ನಸ್ವಾಮಿ ಮತ್ತು ಆತನ ಸಂಬಂಧಿಕರು ಯೋಧ ಪ್ರಭು ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಅವರು ಫೆಬ್ರವರಿ 15 ರಂದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರಕರಣದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ" ಎಂದರು.
ಇದನ್ನೂ ಓದಿ:ವೇಶ್ಯಾವಾಟಿಕೆ ದಂಧೆ: ಠಾಣೆ ಎದುರೇ ಬೆಂಕಿ ಹಂಚಿಕೊಳ್ಳುವ ಬೆದರಿಕೆಯೊಡ್ಡಿದ ತೃತೀಯ ಲಿಂಗಿಗಳು
ಆದರೆ, ಪ್ರಕರಣದಲ್ಲಿ ಡಿಎಂಕೆ ನೇತಾ ಕೈವಾಡವಿದೆ ಎಂದು ಆರೋಪಿಸಿ ಬಿಜೆಪಿಯ ಮಾಜಿ ಸೈನಿಕರ ವಿಭಾಗದ ರಾಜ್ಯಾಧ್ಯಕ್ಷ ರಾಮನ್ ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, ಯೋಧ ಪ್ರಭು ಹತ್ಯೆಗೆ ಸಂಬಂಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, #JusticeForprabhu ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ.
ಪ್ರಕರಣದ ಹಿನ್ನೆಲೆ: ಸಾರ್ವಜನಿಕ ನಲ್ಲಿಯ ಮುಂದೆ ಬಟ್ಟೆ ಒಗೆಯುವ ವಿಚಾರದಲ್ಲಿ ಪ್ರಾರಂಭವಾದ ಜಗಳ ಸೇನಾ ಯೋಧನ ಬಲಿಪಡೆಯುವುದರೊಂದಿಗೆ ಅಂತ್ಯವಾಗಿತ್ತು. ಕೃಷ್ಣಗಿರಿ ಜಿಲ್ಲೆಯ ವೇಲಂಪಟ್ಟಿಯಲ್ಲಿ ಸಾರ್ವಜನಿಕ ನಲ್ಲಿಯ ಮುಂದೆ ಬಟ್ಟೆ ಒಗೆಯುತ್ತಿದ್ದ ಯೋಧ ಪ್ರಭು ಪತ್ನಿ ಮತ್ತು ಡಿಎಂಕೆ ನಗರಸಭೆ ಸದಸ್ಯ ಚಿನ್ನಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಗಮನಿಸಿದ ಯೋಧ ಪ್ರಭು ಪತ್ನಿಗೆ ಬೆಂಬಲವಾಗಿ ಮಾತನಾಡಿದ್ದರು.
ಈ ವೇಳೆ ಅಲ್ಲಿದ್ದವರು ಜಗಳವನ್ನು ಇತ್ಯರ್ಥ ಮಾಡಿ ಕಳುಹಿಸಿದ್ದರು. ಆದರೆ ಈ ವಿಚಾರವಾಗಿ ಕೆರಳಿದ ಚಿನ್ನಸ್ವಾಮಿ ಮತ್ತು ಆತನ 10ಕ್ಕೂ ಹೆಚ್ಚು ಸಂಬಂಧಿಕರು ಸೇನಾಯೋಧನ ಮೇಲೆ ತೀವ್ರ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಕೂಡಲೇ ಗಂಭೀರ ಗಾಯಗೊಂಡಿದ್ದ ಅವರನ್ನು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 15ರಂದು ಸಾವನ್ನಪ್ಪಿದ್ದರು.
ಇದನ್ನೂ ಓದಿ:ಆತ್ಮಹತ್ಯೆ ದಾರಿ ಕುರಿತು ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕಾಟ: ಪೊಲೀಸರಿಂದ ಉಳಿಯಿತು ಯುವಕನ ಪ್ರಾಣ