ನವದೆಹಲಿ: ಕೊರೊನಾ ಮಹಾಮಾರಿಯಿಂದ ದೇಶದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದ್ದು, ಆರ್ಥಿಕತೆಯ ಎಲ್ಲ ವಲಯಗಳು ತೊಂದರೆಗೊಳಗಾಗಿವೆ. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು.
ಲೋಕಸಭೆಯಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಕೊರೊನಾ ವೈರಸ್ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚಿನ ಕರೆನ್ಸಿ (ನೋಟು) ಮುದ್ರಣ ಮಾಡುವ ಯೋಜನೆ ಅಥವಾ ಪ್ರಸ್ತಾವಣೆ ನಮ್ಮ ಮುಂದಿಲ್ಲ. ಕೋವಿಡ್ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ನಿರುದ್ಯೋಗ ನಷ್ಟ ತಪ್ಪಿಸಲು ಹಾಗೂ ಆರ್ಥಿಕ ಚೇತರಿಕೆ ಸರಿದೂಗಿಸಲು ಹೆಚ್ಚಿನ ಕರೆನ್ಸಿ ಮುದ್ರಣ ಮಾಡುವಂತೆ ಅನೇಕ ಅರ್ಥಶಾಸ್ತ್ರಜ್ಞರು ನಮಗೆ ಸಲಹೆ ನೀಡಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಹೆಚ್ಚಿನ ನೋಟ್ ಮುದ್ರಣ ಮಾಡಲ್ಲ ಎಂದಿದ್ದಾರೆ.
ಭಾರತದ ಜಿಡಿಪಿ(ದೇಶದ ಆರ್ಥಿಕ ಬೆಳವಣಿಗೆ ದರ) 2020-21ರ ಅವಧಿಯಲ್ಲಿ ಶೇ. 7.3ರಷ್ಟು ಕುಸಿತ ಕಂಡಿದೆ. ಆದರೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದ್ದು, ಆತ್ಮನಿರ್ಭರ ಭಾರತ ಮಿಷನ್ ಯೋಜನೆಯಿಂದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ ಎಂದಿದ್ದಾರೆ. ಆರ್ಥಿಕತೆ ಚೇತರಿಕೆ ಕಾಣುವ ಉದ್ದೇಶ ಹಾಗೂ ಉದ್ಯೋಗವಕಾಶ ಹೆಚ್ಚಳಕ್ಕೆ ಭಾರತ ಸರ್ಕಾರ 2020-21ರಲ್ಲಿ 29.87 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಹಾವು ಕಚ್ಚಿರುವುದನ್ನು ಮನೆಯಲ್ಲಿ ಹೇಳಲಿಲ್ಲ.. ಹುಟ್ಟುಹಬ್ಬದಂದೇ ಪ್ರಾಣಬಿಟ್ಟ 8 ವರ್ಷದ ಬಾಲಕಿ
ಎರಡನೇ ಹಂತದ ಕೋವಿಡ್ನಿಂದಾಗಿ ನಾವು ತೊಂದರೆಗೊಳಗಾಗಿದ್ದು ನಿಜ. ಆದರೆ 2022ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಏರಿಕೆ ಕಾಣಲಿದೆ ಎಂದು ಅವರು ತಿಳಿಸಿದ್ದು, ಅದು ಶೇ. 10.5ಕ್ಕೆ ಏರಿಕೆಯಾಗಲಿದೆ ಎಂದರು.