ನವದೆಹಲಿ: ತಮಿಳುನಾಡನ್ನು ವಿಭಜಿಸಿ ಮತ್ತೊಂದು ರಾಜ್ಯ ರಚಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಇತ್ತೀಚಿನ ಕೆಲವು ಬೆಳವಣಿಗೆಗಳು ಮತ್ತು ಗಾಳಿ ಸುದ್ದಿಗೆ ವಿರಾಮ ನೀಡಲಾಗಿದೆ.
ತಮಿಳುನಾಡಿನಿಂದ ಹೊಸದಾಗಿ ಕೇಂದ್ರ ಮೀನುಗಾರಿಕೆ, ಡೈರಿ, ಪಶುಸಂಗೋಪನೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾದ ಎಲ್.ಮುರುಗನ್ ತಾನು ಕೊಂಗುನಾಡಿಗೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದರು.
ನಮಕ್ಕಲ್ ಜಿಲ್ಲೆಯ ಕೋನುರ್ಗೆ ಎಲ್.ಮುರುಗನ್ ಸೇರಿದ್ದು, ಇವರ ಹೇಳಿಕೆಯಿಂದಾಗಿ ಈ ಭಾಗದ ಜನರಲ್ಲಿ ಹೊಸ ರಾಜ್ಯ ರಚನೆಯ ಸುದ್ದಿಗಳು ಹರಿದಾಡತೊಡಗಿದವು. ಕೆಲವು ರಾಜಕೀಯ ಪಕ್ಷಗಳು ಎಲ್.ಮುರುಗನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರೆ, ಕೆಲವು ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು.