ಹೈದರಾಬಾದ್: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಬುಧವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನವಜೋತ್ ಸಿಂಗ್ ಸಿಧು, ನನಗೆ ಯಾರೊಂದಿಗೂ ವೈಯಕ್ತಿಕ ವೈಷಮ್ಯ ಇಲ್ಲ, ನಾನು ಸಾರ್ವಜನಿಕ ಸೇವೆ ಮಾಡಲು ಮಾತ್ರ ಬಯಸುತ್ತೇನೆ ಹಾಗೂ ಸತ್ಯಕ್ಕಾಗಿ ಕೊನೆ ಉಸಿರಿರುವವರೆಗೂ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
"ಯಾರೊಂದಿಗೂ ವೈಯಕ್ತಿಕ ವೈಷಮ್ಯವಿಲ್ಲ, ನನ್ನ 17 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿದ್ದರು ಅದು ಸಾರ್ವಜನಿಕರ ಹಿತಕ್ಕಾಗಿ. ರಾಜಕೀಯ ನನ್ನ ಏಕೈಕ ಧರ್ಮ" ಎಂದು ಸಿಧು ಹೇಳಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಧು, ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಹೀಗಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ. ಆದರೆ ಪಕ್ಷದಲ್ಲಿದ್ದುಕೊಂಡು ಸೇವೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಸಿಧು ರಾಜೀನಾಮೆ ನಂತರ ಪಂಜಾಬ್ ಕಾಂಗ್ರೆಸ್ನಲ್ಲಿ ಸರಣಿ ರಾಜೀನಾಮೆಗಳ ಪರ್ವ ಶುರುವಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ನೇಮಕಗೊಂಡ ನಂತರ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ನಡುವಿನ ಜಗಳವನ್ನು ಬಗೆಹರಿಸುವ ಭರವಸೆಯಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್‌ಗೆ ಈ ರಾಜೀನಾಮೆಗಳು ದೊಡ್ಡ ಹೊಡೆತ ನೀಡಿವೆ.
ಕಾಂಗ್ರೆಸ್ನ ಒಬ್ಬ ಸಚಿವ ಮತ್ತು ಮೂವರು ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ಇದ್ದು ಈ ರಾಜೀನಾಮೆ ಪರ್ವ ಕಾಂಗ್ರಸ್ ಹೈ ಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ.