ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಫಾಸ್ಟ್‌ಟ್ಯಾಗ್ ಕೋಡ್ ಸ್ಕ್ಯಾನ್ ಮಾಡಿ ಖಾತೆಯಿಂದ ಹಣ ವಂಚನೆ ಮಾಡಲಾಗುತ್ತದೆ ಎಂಬ ಸಂದೇಶವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ಆಧಾರರಹಿತ ಮತ್ತು ಸುಳ್ಳು ಎಂದು ಭಾರತೀಯ ರಾಷ್ಟ್ರೀಯ ಪಾವತಿ ಮಂಡಳಿ (ಎನ್‌ಪಿಸಿಐ) ಟ್ವಿಟರ್‌ನಲ್ಲಿ ನೀಡಿರುವ ಸ್ಪಷ್ಟನೆಯಲ್ಲಿ ತಿಳಿಸಿದೆ.
ವಿಡಿಯೋದಲ್ಲಿ ಏನಿದೆ?:ಕಾರು ಸ್ವಚ್ಛ ಮಾಡುವ ನೆಪದಲ್ಲಿ ಬಾಲಕನೊಬ್ಬ ಮುಂದುಗಡೆಯ ಗ್ಲಾಸ್ ಕ್ಲೀನ್ ಮಾಡುತ್ತಿರುತ್ತಾನೆ. ಫಾಸ್ಟ್ ಟ್ಯಾಗ್ ಇರುವ ಜಾಗದಲ್ಲಿ ತನ್ನ ಬಲಗೈಯಲ್ಲಿರುವ ವಾಚ್ ತಂದು ಸ್ಕ್ಯಾನ್ ಮಾಡುತ್ತಾನೆ. ಕೂಡಲೇ ಈ ಫಾಸ್ಟ್ ಟ್ಯಾಗ್ ಖಾತೆಯಲ್ಲಿರುವ ಹಣ ಆತನಿಗೆ ವರ್ಗಾವಣೆಯಾಗುತ್ತದೆ ಎಂದು ಕಾರಿನಲ್ಲಿರುವ ವ್ಯಕ್ತಿ ಹೇಳುತ್ತಾನೆ.
ಆಯಾ ಭೌಗೋಳಿಕ ಸ್ಥಳಗಳಿಂದ ಮಾತ್ರ ಎನ್‌ಪಿಸಿಐಯಿಂದ ನೋಂದಾಯಿತರಾದವರು (ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು) ಮಾತ್ರ ಫಾಸ್ಟ್‌ಟ್ಯಾಗ್ ವಹಿವಾಟು ನಡೆಸುತ್ತಾರೆ. ಯಾವುದೇ ಅನಧಿಕೃತ ಸಾಧನ ಬಳಸಿ ಫಾಸ್ಟ್ಟ್ಯಾಗ್ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳ ನಡೆಸಲು ಸಾಧ್ಯವಿಲ್ಲ. ಫಾಸ್ಟ್ಟ್ಯಾಗ್ನಲ್ಲಿ ಆರ್ಎಫ್ಐಡಿ( ರೇಡಿಯೋ ತರಂಗಾಂತರ ಗುರುತಿಸುವಿಕೆ- RFID) ಇರುತ್ತದೆ. ಬ್ಯಾಂಕ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಪ್ರತ್ಯೇಕ ಯುಪಿಐ ಐಡಿ ಇರುತ್ತದೆ ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC) ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಫಾಸ್ಟ್‌ಟ್ಯಾಗ್ ಎಂಬುದು ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL) ಒಡೆತನದ ಬ್ರಾಂಡ್ ಹೆಸರಾಗಿದ್ದು, ಇದು ಎಲೆಕ್ಟ್ರಾನಿಕ್ ಟೋಲಿಂಗ್ ಮತ್ತು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ (NHAI) ಇತರ ಪೂರಕ ಯೋಜನೆಗಳನ್ನು ನಿರ್ವಹಿಸುತ್ತದೆ.