ಲತೇಹಾರ್(ಜಾರ್ಖಂಡ್):ಮಹಾಮಾರಿ ಕೊರೊನಾ ವೈರಸ್ ಜನರ ನಡುವೆ ಸಾಮಾಜಿಕ ಅಂತರ ಇರಬೇಕು ಎಂಬ ಪಾಠ ಕಲಿಸಿದೆ. ಆದರೆ, ಇದರಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನ ಅನುಮಾನದಿಂದ ನೋಡುವ ಸಮಯ ಸಹ ಶುರುವಾಗಿದೆ.
ಕೊರೊನಾದಿಂದ ಅಥವಾ ಇತರ ಕಾಯಿಲೆಯಿಂದ ಸಾವನ್ನಪ್ಪುತ್ತಿರುವವರ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರೊಂದಿಗೆ ಅವರ ಸಂಬಂಧಿಕರು ಭಾಗಿಯಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಸದ್ಯ ಜಾರ್ಖಂಡ್ನಲ್ಲಿ ಅಂತಹದೊಂದು ಘಟನೆ ನಡೆದಿದೆ.
ಜಾರ್ಖಂಡ್ನ ಲತೇಹಾರ್ನಲ್ಲಿ ವ್ಯಕ್ತಿಯೊಬ್ಬ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು ಮಾತ್ರವಲ್ಲ, ಸಂಬಂಧಿಕರು ಸಹ ಭಾಗಿಯಾಗಿಲ್ಲ. ಹೀಗಾಗಿ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗಳು ಅಂತಿಮ ವಿಧಿ - ವಿಧಾನ ನೆರವೇರಿಸಿದ್ದಾರೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡುವಂತೆ ಪತ್ನಿ ಕೇಳಿದ್ರೂ, ಕೊರೊನಾ ಭಯದಿಂದ ಯಾರೂ ಸಹ ಮುಂದೆ ಬಂದಿಲ್ಲ.
ಕಳೆದ 15 ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಿದ್ದ ರಾಜೇಂದ್ರ ಮಿಸ್ತ್ರಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಮನೆಯಲ್ಲಿ ಹೆಂಡತಿ, ಮೂರು ವರ್ಷದ ಮಗ ಹಾಗೂ ಅಪ್ರಾಪ್ತ ಮಗಳು ಇದ್ದಾಳೆ. ರಾಜೇಂದ್ರನ ನಿಧನದ ನಂತರ ಅಂತಿಮ ವಿಧಿ ವಿಧಾನ ನಡೆಸಲು ಗ್ರಾಮಸ್ಥರ ಸಹಾಯ ಕೇಳಿದ್ದಾಳೆ. ಆದರೆ, ಕೊರೊನಾದಿಂದಾಗಿ ಯಾರೂ ಮುಂದೆ ಬಂದಿಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಬ್ಲಾಕ್ ಆಡಳಿತ ಮಂಡಳಿ ಸ್ಥಳಕ್ಕೆ ಬಂದು ಮೃತನ ದೇಹ ಚಂದ್ವಾದಲ್ಲಿನ ಶವಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಅಪ್ರಾಪ್ತ ಮಗಳು ತಂದೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಪತ್ನಿ ಹಾಗೂ ಮಗಳು ಮಾತ್ರ ಉಪಸ್ಥಿತರಿದ್ದರು.