ನವದೆಹಲಿ:ಸಾಂಕ್ರಾಮಿಕ ರೋಗ ಕೊರೊನಾಗೆ ನೀಡಲಾಗುವ ಲಸಿಕೆಯನ್ನು ಜನರು ಪಡೆಯುವುದು, ಬಿಡುವುದು ಅವರಿಗೆ ಬಿಟ್ಟ ಆಯ್ಕೆಯಾಗಿದೆ. ಇದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ.
ಕೋವಿಡ್ ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಿಂದಾಗಿ ತಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಇಬ್ಬರು ಪೋಷಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಈ ಬಗ್ಗೆ ಕೇಂದ್ರದ ಅಭಿಪ್ರಾಯ ಕೇಳಿತ್ತು.
ಇದಕ್ಕೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ, ಲಸಿಕೆಯನ್ನು ಸಾರ್ವಜನಿಕ ಉದ್ದೇಶದಿಂದ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಲಸಿಕಾಕರಣ ಅಭಿಯಾನ ನಡೆಸಲಾಗಿದೆ. ಜನರಿಗೆ ಯಾವುದೇ ಒತ್ತಾಯಪೂರ್ವಕವಾಗಿ ಲಸಿಕೆಯನ್ನು ಹಾಕಲಾಗಿಲ್ಲ. ಈ ಬಗ್ಗೆ ತಿಳಿವಳಿಕೆ ಮಾತ್ರ ನೀಡಲಾಗಿದೆ. ಪಡೆಯುವ ಮತ್ತು ತಿರಸ್ಕರಿಸುವ ಆಯ್ಕೆ ಜನರಿಗಿದೆ. ಇದರ ಮೇಲೆ ಯಾವುದೇ ಕಾನೂನಿನ ಒತ್ತಡವಿಲ್ಲ ಎಂದು ಕೇಂದ್ರ ತಿಳಿಸಿದೆ.