ಕರ್ನಾಟಕ

karnataka

Dress Code: ಜೀನ್ಸ್, ಟಿ ಶರ್ಟ್‌ ಧರಿಸದಂತೆ ನೌಕರರಿಗೆ ಆದೇಶಿಸಿದ ಬಿಹಾರ ಶಿಕ್ಷಣ ಇಲಾಖೆ

By

Published : Jun 29, 2023, 5:43 PM IST

ಬಿಹಾರದ ಶಿಕ್ಷಣ ಇಲಾಖೆಯಲ್ಲಿ ಡ್ರೆಸ್ ಕೋಡ್​ ನಿಯಮ ಜಾರಿ ಮಾಡಲಾಗಿದೆ. ಕಚೇರಿಗಳಿಗೆ ಜೀನ್ಸ್ ಮತ್ತು ಟಿ-ಶರ್ಟ್‌ ಧರಿಸಬರುವಂತಿಲ್ಲ ಎಂದು ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

No jeans, T-shirts at workplace: Bihar education department asks staff to come in formals
ಜೀನ್ಸ್, ಟಿ ಶರ್ಟ್‌ ಧರಿಸದಂತೆ ನೌಕರರಿಗೆ ಆದೇಶಿಸಿದ ಬಿಹಾರ ಶಿಕ್ಷಣ ಇಲಾಖೆ

ಪಾಟ್ನಾ (ಬಿಹಾರ):ಕರ್ತವ್ಯದ ಸಂಸ್ಕೃತಿಗೆ ವಿರುದ್ಧವಾಗಿರುವ ಕಾರಣ ಕಚೇರಿಯಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ಗಳಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸದಂತೆ ಬಿಹಾರ ರಾಜ್ಯ ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ಸೂಚಿಸಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ಆಡಳಿತದ ವಿಭಾಗದ ನಿರ್ದೇಶಕ ಸುಬೋಧ್ ಕುಮಾರ್ ಚೌಧರಿ ಬುಧವಾರ ಆದೇಶ ಹೊರಡಿಸಿದ್ದಾರೆ.

ನೌಕರರು ಕಚೇರಿಯ ಕರ್ತವ್ಯದ ಸಂದರ್ಭದಲ್ಲಿ ಫಾರ್ಮಲ್ ಡ್ರೆಸ್‌ಗಳನ್ನು ಧರಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸಾಂದರ್ಭಿಕ ಉಡುಗೆಯಲ್ಲಿ ಕಚೇರಿಗೆ ಬರುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಣ ಇಲಾಖೆಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ನೌಕರರು ಕಚೇರಿ ಸಂಸ್ಕೃತಿಗೆ ವಿರುದ್ಧವಾದ ಮತ್ತು ಸಂಸ್ಥೆಯ ಘನತೆಗೆ ವಿರುದ್ಧವಾದ ಅನೌಪಚಾರಿಕ ಮತ್ತು ಸಾಂದರ್ಭಿಕ ಉಡುಗೆಯಲ್ಲಿ ಕಚೇರಿಗೆ ಬರುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಇನ್ಮುಂದೆ ಬಿಹಾರದ ಪಾಟ್ನಾದಲ್ಲಿ ಶಿಕ್ಷಣ ಇಲಾಖೆಯಲ್ಲಿ ನಿಯೋಜಿತವಾಗಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರು ಔಪಚಾರಿಕ ಉಡುಗೆಯಲ್ಲಿ ಕಚೇರಿಗೆ ಬಂದು ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಎಂದು ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ.

ಇದನ್ನೂ ಓದಿ:Dress code: ಮಹಾರಾಷ್ಟ್ರದ 135 ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ನಿರ್ಧಾರ; ಉತ್ತರ ಪ್ರದೇಶದ ಜೈನಮಂದಿರಗಳಲ್ಲಿ ನಿಯಮ ಜಾರಿ

ಈ ಆದೇಶದ ಪ್ರತಿಯನ್ನು ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಕಾರ್ಯದರ್ಶಿಯ ಆಪ್ತ ಸಹಾಯಕರು, ವಿಶೇಷ ಕಾರ್ಯದರ್ಶಿಯ ಆಪ್ತ ಸಹಾಯಕರು, ಎಲ್ಲ ನಿರ್ದೇಶಕರು, ಜಂಟಿ ಕಾರ್ಯದರ್ಶಿಗಳು, ಉಪ ನಿರ್ದೇಶಕರು (ಆಡಳಿತ), ಉಪ ಕಾರ್ಯದರ್ಶಿಗಳು, ವಿಶೇಷ ಕಾರ್ಯ ಅಧಿಕಾರಿಗಳು ಮತ್ತು ಎಲ್ಲ ಇತರ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ರವಾನಿಸಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಸರನ್‌ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ನೌಕರರು ಕಚೇರಿಯಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ಗಳನ್ನು ಧರಿಸುವುದನ್ನು ನಿರ್ಬಂಧಿಸಿ ಇದೇ ರೀತಿಯ ಆದೇಶವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದರು. ಅಲ್ಲದೇ, ಕಚೇರಿಯಲ್ಲಿ ಕ್ಯಾಶುಯಲ್ ಡ್ರೆಸ್‌ಗಳನ್ನು ನಿಷೇಧಿಸಿ ಮೊದಲ ಬಾರಿಗೆ ಖುದ್ದು ಬಿಹಾರ ಸರ್ಕಾರವೇ 2019ರಲ್ಲಿ ರಾಜ್ಯ ಸಚಿವಾಲಯದ ಉದ್ಯೋಗಿಗಳಿಗೆ ಸೂಚಿಸಿತ್ತು. ನೌಕರರು ಕಚೇರಿಯಲ್ಲಿ ಸೌಜನ್ಯ ಕಾಪಾಡಿಕೊಳ್ಳುವಂತೆ ಸರ್ಕಾರ ಸೂಚಿಸಿತ್ತು. ಕೆಲಸದ ಸ್ಥಳದಲ್ಲಿ ಸರಳ, ಆರಾಮದಾಯಕ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿತ್ತು. ಇದೀಗ ಶಿಕ್ಷಣ ಇಲಾಖೆಯು ತನ್ನ ನೌಕರರಿಗೆ ನಿರ್ದಿಷ್ಟವಾಗಿ ಈ ಆದೇಶ ಹೊರಡಿಸಿದೆ.

ಇದನ್ನೂ ಓದಿ:'ವಿದ್ಯಾರ್ಥಿಗಳು ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ..': ಆಂಧ್ರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶ

ABOUT THE AUTHOR

...view details