ಅಮಲಾಪುರ(ಆಂಧ್ರಪ್ರದೇಶ):ಅಮಲಾಪುರಂನಲ್ಲಿ ನಡೆದ ವಿಧ್ವಂಸಕ ಘಟನೆಗಳಿಂದಾಗಿ ಅಧಿಕಾರಿಗಳು ಕಳೆದ ಏಳು ದಿನಗಳಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಇದುವರೆಗೂ ಇಂಟರ್ನೆಟ್ ಸೇವೆ ಮರುಸ್ಥಾಪನೆಯಾಗದೇ ಎಲ್ಲಾ ವರ್ಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಸಾಫ್ಟ್ವೇರ್ ಉದ್ಯೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಕೈಯಲ್ಲಿ ಲ್ಯಾಪ್ಟಾಪ್, ಫೋನ್ ಹಿಡಿದು ಸಿಗ್ನಲ್ಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.
ಮನೆಯಿಮದಲೇ ಕೆಲಸ ಮಾಡುವ ಅದೆಷ್ಟೋ ಉದ್ಯೋಗಿಗಳು ಇಂಟರ್ನೆಟ್ ಸೇವೆ ಇಲ್ಲದೇ, ಸಿಗ್ನಲ್ಗಾಗಿ ಜಿಲ್ಲೆಯ ಗಡಿಭಾಗಕ್ಕೆ ತೆರಳುತ್ತಿದ್ದಾರೆ. ದೂರದ ಪ್ರದೇಶಗಳಾದ ಯಾಣಂ, ಕಾಕಿನಾಡ, ರಾಜಮಂಡ್ರಿ, ಪಾಲಕೊಳ್ಳು, ಭೀಮಾವರಂ, ನರಸಪುರಂ ಮುಂತಾದ ಪ್ರದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಗೋದಾವರಿ ನದಿ ತಟದಲ್ಲೂ ಕುಳಿತು ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದೆಡೆ ಡಿಜಿಟಲ್ ಸೇವೆಗಳು ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರು ಆರ್ಥಿಕ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ.
ಅಮಲಾಪುರಂ ಹಿಂಸಾಚಾರ... ಇಂಟರ್ನೆಟ್ ಸೇವೆ ಇಲ್ಲದೇ ಜನ ಕಕ್ಕಾಬಿಕ್ಕಿ:ಕೋನಸೀಮಾ ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಸರ್ಕಾರದ ಪ್ರಸ್ತಾವನೆ ಮುಂದಿಟ್ಟಿದೆ. ಇದನ್ನು ವಿರೋಧಿಸಿ ಕೋನಸೀಮಾ ಸಾಧನಾ ಸಮಿತಿ (ಕೆಎಸ್‌ಎಸ್) ಕಳೆದ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಜಿಲ್ಲಾ ಕೇಂದ್ರವಾದ ಅಮಲಾಪುರದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳೇ ಪ್ರಮುಖ ಕಾರಣ ಎಂದು ಪೊಲೀಸರು ಗುರುತಿಸಿದ್ದು, ಅಧಿಕಾರಿಗಳ ಆದೇಶದ ಮೇರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.