ನವದೆಹಲಿ:ಯಾವುದೇ ವ್ಯಕ್ತಿಯನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ. ಪ್ರಸ್ತುತವಿರುವ ಸರ್ಕಾರದ ಕೋವಿಡ್-19 ಲಸಿಕೆ ನೀತಿ ಅನಿಯಂತ್ರಿತವಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವೈ ಅವರಿದ್ದ ದ್ವಿಸದಸ್ಯ ಪೀಠ, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ಇರುವವರೆಗೆ ರಾಜ್ಯ ಸರ್ಕಾರಗಳು ಅಂತಹ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿತು.
ದೈಹಿಕ ಸ್ವಾತಂತ್ರ್ಯ/ದೈಹಿಕ ಸಮಗ್ರತೆ ಸಾಂವಿಧಾನಿಕ ಹಕ್ಕು. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತಪಡಿಸಲು ಸಾಧ್ಯವಿಲ್ಲ. ಕೋವಿಡ್ ವ್ಯಾಕ್ಸಿನೇಷನ್‌ನ ಪ್ರತಿಕೂಲ ಘಟನೆಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆಯೂ ಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿದೆ.
ಲಸಿಕೆ ಹಾಕಿಸಿಕೊಂಡ ಜನರಿಗಿಂತ ಲಸಿಕೆ ಹಾಕಿಸಿಕೊಳ್ಳದ ಜನರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳು ಯಾವುದೇ ದಾಖಲೆಗಳನ್ನು ನೀಡಿಲ್ಲ. ಲಸಿಕೆ ಹಾಕಿಸಿಕೊಳ್ಳದ ಜನರನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಬಾರದು ಎಂದೂ ಕೋರ್ಟ್ ಹೇಳಿತು.