ನವದೆಹಲಿ:ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳನ್ನು ಆಯ್ದ ನ್ಯಾಯಮೂರ್ತಿಗಳಿಗೆ ಮಾತ್ರ ವಹಿಸುತ್ತಿರುವುದರಿಂದ ನ್ಯಾಯಸಮ್ಮತ ತೀರ್ಪು ಬರುತ್ತಿಲ್ಲ. ಸುಪ್ರೀಂ ಮೇಲೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷ ಕೆಲಸ ಮಾಡಿದ್ದೇನೆ. ಇಷ್ಟು ಸುದೀರ್ಘ ಸಮಯದ ಬಳಿಕ ಈ ರೀತಿ ಹೇಳುವುದು ತಕ್ಕುದಲ್ಲ. ಆದರೆ, ಪರಿಸ್ಥಿತಿಗಳು ಬದಲಾಗಿವೆ. ಕೆಲ ಸೂಕ್ಷ್ಮ ಪ್ರಕರಣಗಳು ಆಯ್ದ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಬಂದಾಗ, ಆ ಪ್ರಕರಣದ ತೀರ್ಪು ಏನಿರಬಹುದು ಎಂಬುದನ್ನು ಕಾನೂನು ಪಂಡಿತರು ಊಹಿಸಬಲ್ಲರು. ಸಂವಿಧಾನದ ಮೂರನೇ ಅಂಗ ತನ್ನ ನಂಬಿಕೆ ಕಳೆದುಕೊಂಡಿದೆ ಎಂದು ಆಪಾದಿಸಿದರು.
ಸುಪ್ರೀಂ ಕೋರ್ಟ್‌ನಿಂದ ಬರುತ್ತಿರುವ ಮಹತ್ವದ ತೀರ್ಪುಗಳು ಈ ನೆಲದ ನಂಬಿಕೆ ಮತ್ತು ವಾಸ್ತವತೆಯನ್ನು ಹೊಂದಿಲ್ಲ. ನ್ಯಾಯಾಲಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುತ್ತದೆ. ಆದರೆ, ಕೆಲ ದಿನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಂಥವರ ಮನೆಗಳ ಮೇಲೆ ದಾಳಿ ಮಾಡುತ್ತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.