ನಾಸಿಕ್(ಮಹಾರಾಷ್ಟ್ರ):ನಾಸಿಕ್ನಿಂದ 75 ಕಿ.ಮೀ ದೂರದಲ್ಲಿ ತ್ರಯಂಬಕೇಶ್ವರ ತಾಲೂಕಿನಲ್ಲಿ ಹಿವಾಲಿ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿನ ಜಿಲ್ಲಾ ಪರಿಷತ್ ನಡೆಸುವ ಶಾಲೆಯಲ್ಲಿನ ಶಿಕ್ಷಣ ವ್ಯವಸ್ಥೆಯಿಂದಾಗಿ ಈ ಗ್ರಾಮ ದೇಶದ ಗಮನ ಸೆಳೆದಿದೆ. ಈ ಶಾಲೆಗೆ ಒಂದೇ ಒಂದು ರಜೆಯಿಲ್ಲ. 365 ದಿನವೂ ತೆರೆದಿರುವ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ 12 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.
ತಾರ್ಕಿಕ ಪ್ರಶ್ನೆಗಳಿಗೆ ನಿಖರ ಉತ್ತರ:1 ರಿಂದ 5ನೇ ತರಗತಿವರೆಗಿನ ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ, ರಾಷ್ಟ್ರೀಯ ಹೆದ್ದಾರಿ, ಭಾರತೀಯ ಸಂವಿಧಾನದ ಎಲ್ಲಾ ವಿಧಿಗಳು, ಪ್ರಪಂಚದಾದ್ಯಂತದ ದೇಶಗಳ ರಾಜಧಾನಿಗಳನ್ನು ನೋಡದೆ ಹೇಳುತ್ತಾರೆ. ಅಲ್ಲದೇ ಈ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯದಲ್ಲಿ ಕೇಳಲಾಗುವ ಗಣಿತ ಮತ್ತು ತಾರ್ಕಿಕ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುತ್ತಾರೆ.
ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು:ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕ ಜ್ಞಾನ ನೀಡದೆ ಉದ್ಯೋಗ ಆಧಾರಿತ ಶಿಕ್ಷಣ ನೀಡುವತ್ತ ಗಮನ ಹರಿಸುತ್ತಿದ್ದಾರೆ. ಒಂದು ದಿನದಲ್ಲಿ 8 ಗಂಟೆಗಳ ಪುಸ್ತಕ ಜ್ಞಾನ ಮತ್ತು ಉಳಿದ 4 ಗಂಟೆಗಳ ಕಾಲ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ಲಂಬರ್, ಫಿಟ್ಟರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪೇಂಟಿಂಗ್ ಇತ್ಯಾದಿಗಳನ್ನು ಕಲಿಸಲಾಗುತ್ತದೆ.