ಗುಜರಾತ್: ಗಾಂಧಿನಗರದ ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿಯಲ್ಲಿ ಹಮ್ಮಿಕೊಂಡ ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಅವರು, 4G ಮತ್ತು 5G ಗಿಂತಲೂ ಮಾತಾಜಿ ಮತ್ತು ಪಿತಾಜಿ ದೊಡ್ಡವರು ಎಂದು ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದ ಸನ್ನಿವೇಶ ನಡೆಯಿತು.
ದೇಶದಲ್ಲಿ 4G ಮತ್ತು 5G ನೆಟ್ವರ್ಕ್ಗಳ ಪ್ರಗತಿಯ ಕುರಿತು ಮಾತನಾಡಿದ ಅಂಬಾನಿ, ಯುವಕರಿಗೆ (G/ji) ವ್ಯತ್ಯಾಸದ ಕುರಿತಾದ ಒಂದು ವಿಷಯವನ್ನು ಹೇಳುತ್ತೇನೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ 4G ಮತ್ತು 5G ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಈ ಜಗತ್ತಿನಲ್ಲಿ ಮಾತಾಜಿ ಮತ್ತು ಪಿತಾಜಿಗಿಂತ ಶ್ರೇಷ್ಠವಾದದ್ದಿಲ್ಲ. ಅವರು ನಿಮ್ಮ ಶಕ್ತಿಯ ಅತ್ಯಂತ ವಿಶ್ವಾಸಾರ್ಹ ಸ್ತಂಭಗಳಾಗಿದ್ದಾರೆ. ನಿಮ್ಮ ಜೊತೆ ಈಗಲೂ ಇದ್ದಾರೆ, ಯಾವಾಗಲೂ ಇರುತ್ತಾರೆ ಎಂದರು.
"ಇಂದು ಬೆಳಕು ನಿಮ್ಮ ಮೇಲೆ ಬಿದ್ದಿರಬಹುದು. ಆದರೆ, ಕನಸುಗಳಿಗೆ ರೆಕ್ಕೆಗಳಾಗಿ ನಿಂತಿರುವುದು ನಿಮ್ಮ ಪೋಷಕರು ಮತ್ತು ಹಿರಿಯರು. ನೀವು ವೇದಿಕೆಯ ಮೇಲೆ ಬಂದು ಪದವಿ ಪ್ರಮಾಣಪತ್ರ ಸ್ವೀಕರಿಸುವುದನ್ನು ನೋಡಲು ಅವರು ಕಾತುರದಿಂದ ಕಾಯುತ್ತಿದ್ದರು. ಇದು ಅವರ ಬಹುದಿನದ ಕನಸು. ನಿಮ್ಮನ್ನು ಇಲ್ಲಿಗೆ ಕರೆತರಲು ಅವರು ಮಾಡಿದ ಹೋರಾಟಗಳು ಮತ್ತು ತ್ಯಾಗವನ್ನು ಎಂದಿಗೂ ಮರೆಯಬಾರದು" ಎಂದು ರಿಲಯನ್ಸ್ ಅಧ್ಯಕ್ಷರು ಹಿತನುಡಿಗಳನ್ನು ಹೇಳಿದರು.
ಇದನ್ನೂ ಓದಿ:2047ರ ವೇಳೆಗೆ ಭಾರತ 40 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ : ಮುಖೇಶ್ ಅಂಬಾನಿ