ನವದೆಹಲಿ : ಟ್ವಿಟ್ಟರ್‌ನಂತಹ ಯಾವುದೇ ಸಾಮಾಜಿಕ ಮಾಧ್ಯಮಗಳ ಉದ್ಯೋಗಿಗಳಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಸರ್ಕಾರ ಎಂದಿಗೂ ಬೆದರಿಕೆ ಹಾಕಿಲ್ಲ ಎಂದು ಐಟಿ ಸಚಿವಾಲಯ ತಿಳಿಸಿದೆ.
ಫೇಸ್‌ಬುಕ್, ವಾಟ್ಸ್ಆ್ಯಪ್ ಮತ್ತು ಟ್ವಿಟ್ಟರ್ ಉದ್ಯೋಗಿಗಳಿಗೆ ಸರ್ಕಾರ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವಾಲಯ, ಸಾಮಾಜಿಕ ಮಾಧ್ಯಮಗಳು ಇತರ ವ್ಯವಹಾರಗಳಂತೆ ಭಾರತದ ಸಂವಿಧಾನ ಮತ್ತು ಕಾನೂನುಗಳನ್ನು ಅನುಸರಿಸಬೇಕಿದೆ ಎಂದಿದೆ.
ಸಂಸತ್ನಲ್ಲಿ ತಿಳಿಸಿದಂತೆ, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸರ್ಕಾರ, ಪ್ರಧಾನಿ ಅಥವಾ ಯಾವುದೇ ಸಚಿವರನ್ನು ಟೀಕಿಸಬಹುದು. ಆದರೆ, ಹಿಂಸಾಚಾರದ ಪ್ರಚಾರ, ಅತಿರೇಕದ ಕೋಮು ವಿಭಜನೆ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸುವಂತಿಲ್ಲ. ಅಂಥವರ ಅದರ ವಿರುದ್ಧ ಕ್ರಮ ಎದುರಿಸಬೇಕಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಂಡ ನೂರಾರು ಪೋಸ್ಟ್‌ಗಳು, ಖಾತೆಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ತೆಗೆದು ಹಾಕುವಂತೆ ಸರ್ಕಾರ ಟ್ವಿಟ್ಟರ್‌ಗೆ ಆದೇಶಿಸಿತ್ತು. ಆದರೆ, ಮೊದಲು ಟ್ವಿಟ್ಟರ್ ಅದನ್ನು ಪಾಲಿಸಿರಲಿಲ್ಲ. ದಂಡ ಕಟ್ಟುವ ನಿಯಮ ಪುಸ್ತಕವನ್ನು ತೋರಿಸಿದ ಬಳಿಕ ಆದೇಶವನ್ನು ಪಾಲಿಸಿತು ಎಂದು ತಿಳಿಸಿದೆ.
ಇದನ್ನೂ ಓದಿ : ಬಂಗಾಳದಲ್ಲಿ ಅರ್ಥಶಾಸ್ತ್ರಜ್ಞ, ತಮಿಳುನಾಡಿಗೆ 'ಸಿಂಗಂ', ಕೇರಳಕ್ಕೆ 'ಮೆಟ್ರೋಮ್ಯಾನ್': ವಿಧಾನ ಕದನಕ್ಕೆ ಬಿಜೆಪಿ ರೆಡಿ
ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಇತ್ತೀಚಿನ ಮಾರ್ಗಸೂಚಿಗಳು ಬಳಕೆದಾರರ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಜಾರಿಗೆ ತರಲು ವೇದಿಕೆ ಕಲ್ಪಿಸುತ್ತದೆ. ಯಾವುದೇ ಸರ್ಕಾರಿ ಸಂವಹನಗಳು, ಲಿಖಿತ ಅಥವಾ ಮೌಖಿಕವಾಗಿ ಸಾಮಾಜಿಕ ಮಾಧ್ಯಮಗಳ ಉದ್ಯೋಗಿಗಳಿಗೆ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿಲ್ಲ. ಸರ್ಕಾರ ಟೀಕೆ ಮತ್ತು ಭಿನ್ನಾಭಿಪ್ರಾಯವನ್ನು ಸ್ವಾಗತಿಸುತ್ತದೆ. ಭಾರತದ ಹೊರಗಿನ ಭಯೋತ್ಪಾದಕ ಗುಂಪುಗಳು ದ್ವೇಷ ಮತ್ತು ಹಿಂಸಾಚಾರ ಹೆಚ್ಚಿಸುವುದು ಮತ್ತು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ಬಳಸಿಕೊಳ್ಳುವುದು ಮಹಿಳಾ ಬಳಕೆದಾರರ ಸುರಕ್ಷತೆಗೆ ಅಪಾಯವಾಗಿದೆ ಎಂದು ಸಚಿವಾಲಯ ಹೇಳಿದೆ.