ಕಟಿಹಾರ/ ಬಕ್ಸಾರ (ಬಿಹಾರ): ಕೊರೊನಾ ವೈರಸ್ ಮಹಾಮಾರಿಯ ಅಬ್ಬರದ ನಡುವೆ ಮನಕಲಕುವ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪಿಪಿಇ ಡ್ರೆಸ್ ಧರಿಸಿದ ಕೆಲವರು ಮೃತ ದೇಹಗಳನ್ನು ಆ್ಯಂಬುಲೆನ್ಸ್ನಿಂದ ಸ್ಮಶಾನ ಭೂಮಿಗೆ ದರದರನೆ ಎಳೆದೊಯ್ಯುವ ದೃಶ್ಯಗಳು ಎಲ್ಲೆಡೆ ಸಂತಾಪ ಹಾಗೂ ಆಕ್ರೋಶದ ಅಲೆ ಉಕ್ಕಿಸಿವೆ.
ಕೋವಿಡ್ನಿಂದ ಸತ್ತವರ ಶವಗಳಿಗೆ ಯಾವುದೇ ಮರ್ಯಾದೆ ನೀಡದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಬಿಹಾರ ಸರ್ಕಾರದ ವಿರುದ್ಧ ಕೇಳಿ ಬಂದ ಮಧ್ಯೆಯೇ ಇಂಥದೊಂದು ಘಟನೆಯ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಆರೋಪಗಳಿಗೆ ಪುಷ್ಟಿ ನೀಡುವಂತಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಬಿಹಾರ ಉಪಮುಖ್ಯಮಂತ್ರಿಯ ಸ್ವಕ್ಷೇತ್ರವಾದ ಕಟಿಹಾರ್ನಲ್ಲಿ ಎಂಬುದು ಮತ್ತೂ ಆತಂಕಕಾರಿಯಾಗಿದೆ.
ಕೋವಿಡ್ನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕಾಗಿ ಕಟಿಹಾರ್ - ಪೂರ್ಣಿಯಾ ರಸ್ತೆಯ ಭಾಸನಾ ಸೇತುವೆ ಕೆಳಗೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿತ್ತು. ಆದರೆ ಹೀಗೆ ಶವಗಳನ್ನು ಎಳೆದೊಯ್ಯುವ ದೃಶ್ಯಾವಳಿಗಳು ಜಿಲ್ಲಾಡಳಿತದ ಭರವಸೆ ಹುಸಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿವೆ.