ನವದೆಹಲಿ:ಸರ್ಕಾರಿ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಹರಾಜು ಪ್ರಕ್ರಿಯೆಯಲ್ಲಿ ಟಾಟ್ ಸನ್ಸ್ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬ ವರದಿ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾವನ್ನು ಪಡೆದುಕೊಳ್ಳಲು ಟಾಟಾ ಸನ್ಸ್ ಸಲ್ಲಿಸಿರುವ ಬಿಡ್‌ಗೆ ಕೇಂದ್ರ ಅನುಮೋದನೆ ನೀಡಿದೆ ಎಂಬ ವರದಿ ಇಂದು ಎಲ್ಲೆಡೆ ಹರಿದಾಡುತ್ತಿತ್ತು. ಇದಕ್ಕೆ ಖುದ್ದಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಾಗ ಖಂಡಿತವಾಗಿಯೂ ಮಾಧ್ಯಮಗಳಿಗೆ ಖುದ್ದಾಗಿ ತಿಳಿಸಲಾಗುವುದು ಎಂದಿದೆ. ಇದೇ ವೇಳೆ, ಏರ್ ಇಂಡಿಯಾ ಟಾಟಾ ಗ್ರೂಪ್ ಪಾಲಾಗಿರುವ ಮಾಹಿತಿಯನ್ನು ಅಲ್ಲಗಳೆದಿದೆ.
ನಷ್ಟದಲ್ಲಿರುವ ಸರ್ಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳ ಹಣಕಾಸು ಬಿಡ್ ಮುಕ್ತಾಯಗೊಂಡಿದ್ದು, ಏರ್ ಇಂಡಿಯಾವನ್ನು ಮರುಪಡೆಯುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಬ್ಲೂಮ್ಬರ್ಗ್ ಕ್ವಿಂಟ್ ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಟಾಟಾ ಸನ್ಸ್ ವಕ್ತಾರರು ಕೂಡಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಇದನ್ನೂ ಓದಿ:Breaking News... Air Indiaವನ್ನು ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ TATA ಗ್ರೂಪ್.. ವರದಿ
ಏರ್ ಇಂಡಿಯಾ ಇತಿಹಾಸ
1932ರ ಅಕ್ಟೋಬರ್ನಲ್ಲಿ 'ಟಾಟಾ ಏರ್‌ಲೈನ್ಸ್' ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಭಾರೀ ನಷ್ಟ ಅನುಭವಿಸುತ್ತಿದೆ. ಏರ್ ಇಂಡಿಯಾ ಸುಮಾರು 43,000 ಕೋಟಿ ರೂ. ಮೊತ್ತದ ಸಾಲ ಉಳಿಸಿಕೊಂಡಿದೆ. ಹೀಗಾಗಿ ಸರ್ಕಾರವು ವಿಮಾನಗಳ ಷೇರು ಮಾರಾಟಕ್ಕೆ ಮುಂದಾಗಿತ್ತು.
2018ರಲ್ಲಿ ಶೇ.76ರಷ್ಟು ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಶೇ.100ರಷ್ಟು ಹಣಕಾಸು ಬಿಡ್‌ಗೆ ಸರ್ಕಾರ ಘೋಷಣೆ ಮಾಡಿತ್ತು.
ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದಿದೆ ಎಂಬ ವರದಿ ನಿರಾಕರಿಸಿದ ಕೇಂದ್ರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏರ್ ಇಂಡಿಯಾ ಮಾರಾಟ ಮಾಡುವ ಎರಡನೇ ಪ್ರಯತ್ನ ಇದಾಗಿದ್ದು, ಈ ಹಿಂದೆ 2018ರಲ್ಲೂ ವಿಮಾನಯಾನ ಸಂಸ್ಥೆ ಮಾರಾಟಕ್ಕೆ ಮುಂದಾಗಿತ್ತು.