ನವದೆಹಲಿ:ರಾಷ್ಟ್ರದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಒಮಿಕ್ರಾನ್ ಭೀತಿಯ ನಡುವೆ ಮೂರನೇ ಡೋಸ್ ಅಥವಾ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ಕೆಲವು ಮಂದಿಗೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಕೋವಿಡ್ನಿಂದ ರಕ್ಷಿಸುವ ವಿಚಾರಕ್ಕೆ ಸಂಬಂಧಿಸಿದಂತೆ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ. ಆದರೆ, 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ವ್ಯಾಕ್ಸಿನೇಷನ್ ಪ್ರಮಾಣ:ಕೇಂದ್ರ ಸರ್ಕಾರದ ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 18,28,875 ಮಂದಿಗೆ ಮೊದಲ ಕೋವಿಡ್ ಲಸಿಕೆ, 41,96,664 ಮಂದಿಗೆ ಎರಡನೇ ಕೋವಿಡ್ ಲಸಿಕೆ ನೀಡಲಾಗಿದೆ. ಈವರೆಗೆ 87,70,05,631 ಮೊದಲ ಡೋಸ್ಗಳನ್ನು, 66,24,20,800 ಎರಡನೇ ಡೋಸ್ಗಳನ್ನು ನೀಡಲಾಗಿದೆ.