ನವದೆಹಲಿ:2021ರ ಹಜ್ ಯಾತ್ರೆ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಕೋವಿಡ್ -19 ಗೆ ಸಂಬಂಧಪಟ್ಟಂತೆ ವಾರ್ಷಿಕ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಭಾರತ ಬದ್ಧವಾಗಿರುವುದಾಗಿಯೂ ಅವರು ಹೇಳಿದರು.
"ಹಜ್ ಯಾತ್ರೆ ಸೌದಿ ಅರೇಬಿಯಾ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ. ಭಾರತ ತನ್ನ ನಿರ್ಧಾರದಲ್ಲಿ ಸೌದಿ ಸರ್ಕಾರದ ಪರವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ವರ್ಷ ಹಜ್ ರದ್ದಾಯಿತು, ಈ ವರ್ಷ ಇನ್ನೂ ಏನನ್ನೂ ನಿರ್ಧರಿಸಲಾಗಿಲ್ಲ" ಎಂದು ನಖ್ವಿ ಹೇಳಿದರು .
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಇರುವ ಸೀಮಿತ ಜನರು ಮಾತ್ರ ಹಜ್ ಕರ್ಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈ ವರ್ಷ ಸೌದಿ ಅರೇಬಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದರೂ, ಹಜ್ ಯಾತ್ರೆಯ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.