ನವದೆಹಲಿ: ''ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಲಾಗಿದೆ" ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದರು. "ಸಂಸದೀಯ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲು'' ಎಂದು ಲೋಕಸಭೆಯಲ್ಲಿ ಅವರು ಟೀಕಿಸಿದರು.
ಮಣಿಪುರ ಹಿಂಸಾಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮೌನ ಖಂಡಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಇಂದು ಇದೇ ನಿಲುವಳಿ ಮೇಲೆ ಮಾತನಾಡಿದ ರಾಹುಲ್ ಗಾಂಧಿ, ''ಜನರ ಧ್ವನಿಯೇ ಭಾರತ. ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ. ನೀವು ದೇಶದ್ರೋಹಿಗಳು'' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್ ವಾಗ್ದಾಳಿ
ರಾಹುಲ್ ಗಾಂಧಿ ಭಾಷಣದ ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ''ಭಾರತ ಮಾತೆಯ ಹತ್ಯೆ'' ಹೇಳಿಕೆಯನ್ನು ಖಂಡಿಸಿದ ಅವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. "ನಾನು ಇವರ (ಕಾಂಗ್ರೆಸ್ನವರ) ವರ್ತನೆಯನ್ನು ಖಂಡಿಸುತ್ತೇನೆ. ಸಂಸತ್ತಿನ ಇತಿಹಾಸದಲ್ಲಿ ಭಾರತ ಮಾತೆಯ ಹತ್ಯೆಯ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ್ದು ಇದೇ ಮೊದಲು. ಇದಕ್ಕೆ ಕಾಂಗ್ರೆಸ್ ನಾಯಕರು ಮೇಜು ಕುಟ್ಟಿ ಬೆಂಬಲಿಸುತ್ತಾರೆ'' ಎಂದು ಕಿಡಿಕಾರಿದರು.
ಮುಂದುವರೆದು, ''ಮಣಿಪುರ ಭಾರತದ ಅವಿಭಾಜ್ಯ ಅಂಗ. ಕಾಂಗ್ರೆಸ್ನ ಮೈತ್ರಿಪಕ್ಷದ ತಮಿಳುನಾಡಿನ ಸದಸ್ಯರೊಬ್ಬರು ಭಾರತ ಎಂದರೆ ಉತ್ತರ ಭಾರತ ಎಂದು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಧೈರ್ಯವಿದ್ದರೆ ಬಗ್ಗೆ ಪ್ರತಿಕ್ರಿಯೆ ನೀಡಲಿ'' ಎಂದು ಇರಾನಿ ಸವಾಲೆಸೆದರು. ಅಲ್ಲದೇ, 1990ರ ಕಾಶ್ಮೀರಿ ಪಂಡಿತರ ವಿರುದ್ಧದ ದಂಗೆ, 1984ರ ಸಿಖ್ ವಿರೋಧಿ ಗಲಭೆಗಳು, ಅಸ್ಸಾಂನಲ್ಲಿ ನಡೆದ ಹಿಂಸಾಚಾರ ಮತ್ತು ಪ್ರತಿಪಕ್ಷಗಳ ರಾಜ್ಯಗಳಾದ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿನ ಮಹಿಳೆಯರ ಮೇಲಿನ ಹಿಂಸಾಚಾರದ ಘಟನೆಗಳನ್ನು ಪಟ್ಟಿ ಮಾಡಿದ ಅವರು, ''ಭಾರತದ ಧ್ವನಿಯ ಬಗ್ಗೆ ಮಾತನಾಡುವವರು ಕಾಶ್ಮೀರಿ ಪಂಡಿತರು ಮತ್ತು ಸಿಖ್ ವಿರೋಧಿ ಗಲಭೆಯ ಸಂತ್ರಸ್ತರ ಧ್ವನಿಯನ್ನು ಎಂದಿಗೂ ಕೇಳಲಿಲ್ಲ'' ಎಂದರು.
ಸರ್ಕಾರದ ವೈಫಲ್ಯಗಳನ್ನು ಸಮರ್ಥಿಸಿಕೊಂಡ ಸ್ಮೃತಿ ಇರಾನಿ- ತರೂರ್ ಟಾಂಗ್: ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಉಲ್ಲೇಖಿಸಿದ ಹಳೆಯ ಘಟನೆಗಳ ಕುರಿತಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
''ಸ್ಮೃತಿ ಇರಾನಿ ಅವರ ಪ್ರತಿಕ್ರಿಯೆಯು ಕಾಂಗ್ರೆಸ್ ಆಡಳಿತದಲ್ಲಿ ಹಲವು ದಶಕಗಳ ಹಿಂದೆ ನಡೆದ ಘಟನೆಗಳು ಮತ್ತು ದೌರ್ಜನ್ಯಗಳ ಸರಣಿಯನ್ನು ಕೇಂದ್ರೀಕರಿಸಿದೆ. ಈ ಹಿಂದೆಂದೂ ಪರಿಸ್ಥಿತಿ ಇಷ್ಟೇ ಕೆಟ್ಟದ್ದಾಗಿತ್ತು ಎಂದು ಸಾಬೀತುಪಡಿಸಲು ಅವರು ಯತ್ನಿಸಿದರು. ಈ ವಾದದ ಸಾಲುಗಳು ಪರೋಕ್ಷವಾಗಿ ಭಾರತ ಸರ್ಕಾರದ ವೈಫಲ್ಯಗಳ ಕುರಿತು ಪ್ರತಿಪಕ್ಷದ ಸಮರ್ಥನೆಗಳನ್ನು ಬೆಂಬಲಿಸಿವೆ. ಏಕೆಂದರೆ, ಅವರು ಹೇಳುತ್ತಿರುವ ಎಲ್ಲವೂ... ಅಂದರೆ, 'ಏನೀಗ?, ನೀವೂ ಕೆಟ್ಟವರಾಗಿದ್ದೀರಿ' ಎಂಬಂತಿವೆ. ವಸ್ತುನಿಷ್ಠವಾದ ಕ್ರಮ ತೆಗೆದುಕೊಳ್ಳದೇ ಇದ್ದಾಗ ಇಂತಹದನ್ನು ಆಶ್ರಯಬೇಕಾಗುತ್ತದೆ'' ಎಂದು ತರೂರ್ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ:'ಸ್ತ್ರೀ ದ್ವೇಷಿ ವ್ಯಕ್ತಿ': ಸಂಸತ್ತಿನಲ್ಲಿ ರಾಹುಲ್ 'ಫ್ಲೈಯಿಂಗ್ ಕಿಸ್'ಗೆ ಸ್ಮೃತಿ ಇರಾನಿ ಆಕ್ಷೇಪ; ಸ್ಪೀಕರ್‌ಗೆ ಶೋಭಾ ಕರಂದ್ಲಾಜೆ ದೂರು