ನವದೆಹಲಿ: "ದೇಶದ ಆರ್ಥಿಕತೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಜಗತ್ತಿನಲ್ಲೇ 10-12ನೇ ಸ್ಥಾನದಲ್ಲಿತ್ತು. 2014ರ ಬಳಿಕ ದೇಶದ ಆರ್ಥಿಕತೆ ವಿಶ್ವದ ಅಗ್ರ 5ನೇ ಸ್ಥಾನಕ್ಕೇರಿದೆ. ನಮ್ಮ ಮೂರನೇ ಅವಧಿಯಲ್ಲಿ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಇಡೀ ದೇಶದ ಭರವಸೆಯಾಗಿದೆ. 2028ರಲ್ಲಿ ನೀವು ಮತ್ತೆ ಅವಿಶ್ವಾಸ ನಿರ್ಣಯವನ್ನು ತೆಗೆದುಕೊಂಡು ಬನ್ನಿ" ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿಂದು ಪ್ರತಿಪಕ್ಷಗಳ ಮಂಡಿಸಿರುವ ವಿಶ್ವಾಸ ನಿರ್ಣಯಕ್ಕೆ ಉತ್ತರಿಸುತ್ತಾ ಮೋದಿ, ''ನಮ್ಮ ಸರ್ಕಾರದ ಯೋಜನೆಗಳು ಮತ್ತು ಕಠಿಣ ಪರಿಶ್ರಮದಿಂದಾಗಿ ದೇಶದ ಆರ್ಥಿಕತೆಯು ಅಗ್ರ ಮೂರನೇ ಸ್ಥಾನಕ್ಕೇರಲಿದೆ'' ಎಂದು ನುಡಿದರು. ''ಬೆಂಗಳೂರಿನಲ್ಲಿ ನೀವು (ಪ್ರತಿಪಕ್ಷಗಳು) ಯುಪಿಎಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದೀರಿ. ಹಳೆ ಯಂತ್ರಗಳಿಗೆ ಹೊಸ ಬಣ್ಣ ಬಳಿದು ಸಂಭ್ರಮಾಚರಣೆ ಮಾಡುತ್ತಿದ್ದೀರಿ. ನೀವು ಆತ್ಮಾವಲೋಕನ ಮಾಡಿಕೊಳ್ಳಿ. ತಮಿಳುನಾಡು ಸರ್ಕಾರದ ಒಬ್ಬ ಸಚಿವರು ತಮಗೆ ಭಾರತ ಮುಖ್ಯವಲ್ಲ, ತಮಿಳುನಾಡು ಭಾರತದಲ್ಲಿಲ್ಲ ಎಂದು ಹೇಳುತ್ತಾರೆ. ನೀವು NDA ಅನ್ನು ಕಳ್ಳತನ ಮಾಡಿದ್ದೀರಿ. I.N.D.I.A ವಿಭಜನೆ ಮಾಡಿದ್ದೀರಿ. ವರ್ಣಮಾಲೆಗಳ ನಡುವೆ ಚುಕ್ಕೆಗಳನ್ನು ಇಡುವ ಮೂಲಕ ಭಾರತವನ್ನು ವಿಭಜಿಸುವ ಪ್ರಯತ್ನ ನಿಮ್ಮದು. ಇದು ಇಂಡಿಯಾ ಅಲ್ಲ, ಘಾಮಂಡಿಯಾ'' ಎಂದು ಟೀಕಿಸಿದರು.