ನವದೆಹಲಿ:ಮಣಿಪುರ ಹಿಂಸಾಚಾರ ಕುರಿತಾಗಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸುದೀರ್ಘ ಉತ್ತರ ನೀಡಿದರು. ''ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಎಲ್ಲ ದಾಖಲೆಗಳನ್ನು ಮುರಿದು ಜಯಭೇರಿ ಬಾರಿಸಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ದೇವರು ತುಂಬಾ ಕರುಣಾಮಯಿ. ಆತ ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾನೆ. ಈ ಅವಿಶ್ವಾಸ ನಿರ್ಣಯವನ್ನು ದೇವರ ಆಶೀರ್ವಾದ ಎಂದೇ ನಾನು ಭಾವಿಸುತ್ತೇನೆ. 2018ರಲ್ಲಿ ನಮ್ಮ ವಿರುದ್ಧ ಅವಿಶ್ವಾಸ ಪ್ರಸ್ತಾವ ತಂದಿದ್ದರು. ಅಂದು ನಾನು ಇದು ನಮ್ಮ ಮೇಲಿನ ಅವಿಶ್ವಾಸವಲ್ಲ, ಪ್ರತಿಪಕ್ಷಗಳ ಮೇಲಿನ ಅವಿಶ್ವಾಸ ಎಂದು ಹೇಳಿದ್ದೆ. ಜನತೆಯ ಬಳಿ ಹೋದಾಗ ಅವರು ಪ್ರತಿಪಕ್ಷಗಳ ಮೇಲೆಯೇ ಅವಿಶ್ವಾಸ ಘೋಷಣೆ ಮಾಡಿದರು. ದೇಶದ ಜನರು ಬಿಜೆಪಿ ಹಾಗೂ ಎನ್ಡಿಎಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರು. ಆದ್ದರಿಂದ ಪ್ರತಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟ'' ಎಂದು ಮೋದಿ ಹೇಳಿದರು.
''ಜನರು ನಿರ್ದಿಷ್ಟ ಉದ್ದೇಶಕ್ಕಾಗಿ ಅವರನ್ನು (ಪ್ರತಿಪಕ್ಷಗಳು) ಕಳುಹಿಸಿದ್ದಾರೆ. ಆದರೆ, ಜನರ ಭಾವನೆಗಳಿಗೆ ದ್ರೋಹ ಮಾಡುತ್ತಿದ್ದಾರೆ. ದೇಶದ ಒಳಿತು ಮತ್ತು ಭವಿಷ್ಯದ ಬಗ್ಗೆ ನಾವು ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕಾದ ಈ ಸಮಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ'' ಎಂದು ಟೀಕಿಸಿದರು.
''ಪ್ರತಿಪಕ್ಷಗಳಿಗೆ ದೇಶದ ಭವಿಷ್ಯದ ಬಗ್ಗೆ ಆಸಕ್ತಿಯಿಲ್ಲ. ಅವರಿಗೆ ತಮ್ಮ ಪಕ್ಷದ ಬಗ್ಗೆಯೇ ಹೆಚ್ಚು ಚಿಂತೆ. ನಾನು 2018ರಲ್ಲಿ ಪ್ರತಿಪಕ್ಷಗಳಿಗೆ, ಸ್ವಲ್ಪ ತಯಾರಾಗಿ ಬನ್ನಿ ಎಂದು ಹೇಳಿದ್ದೆ. 2023ನೇ ವರ್ಷ ಬಂದರೂ ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿಲ್ಲ. ಕಳೆದ ಐದು ವರ್ಷಗಳಷ್ಟು ಸಮಯ ಸಿಕ್ಕರೂ ಪ್ರತಿಪಕ್ಷಗಳು ತಯಾರಾಗಿಲ್ಲ. ಅವಿಶ್ವಾಸ ನಿರ್ಣಯ ನಿಮ್ಮ (ಪ್ರತಿಪಕ್ಷ) ಕಡೆಯಿಂದ ಬಂದರೂ, ನಮ್ಮ ಕಡೆಗಳಿಂದ ಬೌಂಡರಿ, ಸಿಕ್ಸರ್ಗಳು ಸಿಡಿದವು'' ಎಂದು ಮೋದಿ ತಿಳಿಸಿದರು.