ನವದೆಹಲಿ:ಹಿಂಸಾಚಾರಪೀಡಿತ ಮಣಿಪುರದೊಂದಿಗೆ ಇಡೀ ದೇಶವಿದೆ. ರಾಜ್ಯದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿದೆ. ತಪ್ಪಿಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆ ಆಗಲಿದೆ. ಮಣಿಪುರ ಮತ್ತೆ ವಿಕಾಸದ ಹಾದಿಯಲ್ಲಿ ಸಾಗಲಿದೆ ಎಂದು ಪ್ರಧಾನಿ ಮೋದಿ ನರೇಂದ್ರ ಹೇಳಿದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಸುಮಾರು 2:13 ಗಂಟೆಗಳಷ್ಟು ಸುದೀರ್ಘವಾಗಿ ಮೋದಿ ಮಾತನಾಡಿದರು. ಇದೇ ವೇಳೆ ಮಣಿಪುರವೇ ಸೇರಿದಂತೆ ಇಡೀ ಈಶಾನ್ಯ ರಾಜ್ಯಗಳ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ನಿದರ್ಶನಗಳನ್ನು ನೀಡಿದರು.
ರಾಹುಲ್ 'ಭಾರತ ಮಾತೆ ಹತ್ಯೆ' ಹೇಳಿಕೆಗೆ ಮೋದಿ ಚಾಟಿ: ಇದೇ ವೇಳೆ, "ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಲಾಗಿದೆ" ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ''ಭಾರತ ಮಾತೆಗೆ ಮಾಡಿರುವ ಈ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಹತಾಶೆಯಿಂದ ಭಾರತ ಮಾತೆಗೆ ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷ ವಂದೇ ಮಾತರಂ ಹಾಡನ್ನೂ ವ್ಯಂಗ್ಯ ಮಾಡುತ್ತಿದೆ. ಅವರು ತುಕ್ಡೇ ತುಕ್ಡೇ ಗ್ಯಾಂಗ್ ಜೊತೆಗಿದ್ದಾರೆ. ಆ ಪಕ್ಷಕ್ಕೆ ಅಧಿಕಾರ ಮಾತ್ರ ಬೇಕಿದೆ'' ಎಂದು ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ:PM Modi: ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ; 2024ರಲ್ಲಿ NDA ಎಲ್ಲ ದಾಖಲೆ ಮುರಿಯಲಿದೆ-ಲೋಕಸಭೆಯಲ್ಲಿ ಪ್ರಧಾನಿ ಮೋದಿ
ಈಶಾನ್ಯ ರಾಜ್ಯಗಳ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ: ಇದೇ ವೇಳೆ, ಈ ಹಿಂದೆ ಈಶಾನ್ಯ ರಾಜ್ಯಗಳೊಂದಿಗೆ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ಉಲ್ಲೇಖಿಸಿದ ಮೋದಿ, ಕೆಲವು ನಿದರ್ಶನಗಳನ್ನು ನೀಡಿದರು. ''1966ರ ಮಾರ್ಚ್ 5ರಂದು ಇಂದಿರಾ ಗಾಂಧಿ ಕಾಲದಲ್ಲಿ ಮಿಜೋರಾಂ ನಾಗರಿಕರ ಮೇಲೆ ವಾಯುಸೇನೆಯಿಂದ ದಾಳಿ ಮಾಡಲಾಗಿತ್ತು. ಇದನ್ನು ಗೌಪ್ಯವಾಗಿಯೇ ಇಡಲಾಗಿತ್ತು. 1962ರ ಚೀನಾ ವಿರುದ್ಧದ ಯುದ್ಧ ಸಂದರ್ಭದಲ್ಲಿ ರೇಡಿಯೋದಲ್ಲಿ ನೆಹರು ಅಸ್ಸಾಂ ಜನರನ್ನುದ್ದೇಶಿಸಿ ಆಡಿದ ಮಾತುಗಳು ಅಸ್ಸಾಂ ಜನರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಉದ್ದೇಶಪೂರ್ವಕವಾಗಿ ನೆಹರು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಲೋಹಿಯಾ ಅವರೂ ಕೂಡಾ ಗಂಭೀರ ಆರೋಪ ಮಾಡಿದ್ದರು'' ಎಂದು ಉಲ್ಲೇಖಿಸಿದರು.
''ಈಶಾನ್ಯ ರಾಜ್ಯಗಳ ಎಲ್ಲ ಸಮಸ್ಯೆಗಳಿಗೂ ಕಾರಣ ಕಾಂಗ್ರೆಸ್ ಪಕ್ಷ. ಒಂದು ಕಾಲದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಉಗ್ರವಾದಿಗಳ ಮಾತೇ ನಡೆಯುತ್ತಿತ್ತು. ಆಗ ಯಾರ ಸರ್ಕಾರವಿತ್ತು?. ಮಣಿಪುರದ ಶಾಲೆಗಳಲ್ಲಿ ರಾಷ್ಟ್ರಗೀತೆಗಳನ್ನೂ ಹಾಡಲು ಬಿಡುತ್ತಿರಲಿಲ್ಲ. ಮಣಿಪುರದಲ್ಲಿ ದೇಗುಲದ ಗಂಟೆಗಳು ಸಂಜೆ 4 ಗಂಟೆಯಿಂದ ಮೊಳಗುವಂತಿರಲಿಲ್ಲ. ಆಗ ಇದ್ದ ಸರ್ಕಾರ ಯಾರದ್ದು?, ಕಾಂಗ್ರೆಸ್‌ನವರು ಮಾನವೀಯತೆ ಬಗೆಗಾಗಲೀ, ದೇಶದ ಅಭಿವೃದ್ಧಿ ಕುರಿತಾಗಲಿ ಯೋಚನೆ ಮಾಡುವುದಿಲ್ಲ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುತ್ತಾ ಬಂದಿದ್ದಾರೆ'' ಎಂದು ಟೀಕಿಸಿದರು.
ಲಕ್ಷಾಂತರ ಕೋಟಿ ವೆಚ್ಚದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ: ''ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮಾಡುತ್ತಿದ್ದೇವೆ'' ಎಂದು ಹೇಳಿದ ಮೋದಿ, ಸಾಕಷ್ಟು 'ಮೊದಲ' ಅಭಿವೃದ್ಧಿಗಳ ವಿವರ ನೀಡಿದರು. ಅಂತಿಮವಾಗಿ, ತಮ್ಮ ಭಾಷಣದಲ್ಲಿ ''ನನ್ನ ಬದುಕಿನ ಪ್ರತಿ ಕ್ಷಣ, ದೇಹದ ಪ್ರತಿ ಕಣ ಕಣವನ್ನೂ ದೇಶಕ್ಕಾಗಿ ಸಮರ್ಪಿಸುತ್ತೇನೆ'' ಎಂದರು.
ಇದನ್ನೂ ಓದಿ:PM Modi: ಬೆಂಗಳೂರಿನಲ್ಲಿ ಯುಪಿಎ ಅಂತಿಮ ವಿಧಿವಿಧಾನ ನಡೆದಿದೆ; 2028ರಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ತನ್ನಿ: ಮೋದಿ ವಾಗ್ದಾಳಿ