ನವದೆಹಲಿ: ಮಣಿಪುರ ಹಿಂಸಾಚಾರ ಕುರಿತಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಧ್ವನಿ ಮತದಾನದಲ್ಲಿ ಸರ್ಕಾರ ಗೆದ್ದಿದೆ.
ಮಣಿಪುರಕ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಅವಿಶ್ವಾಸ ನಿಲುವಳಿ ಮಂಡಿಸಿದ್ದರು. ಈ ನಿಲುವಳಿ ಮೇಲೆ ಸತತ ಮೂರು ದಿನಗಳ ಕಾಲ ಚರ್ಚೆ ನಡೆಸಲಾಗಿತ್ತು. ಇಂದು ಸದನದಲ್ಲಿ ಪ್ರಧಾನಿ ಮೋದಿ 2 ಗಂಟೆ 15 ನಿಮಿಷಗಳ ಕಾಲ ಸುದೀರ್ಘ ಉತ್ತರ ನೀಡಿದರು. ಬಳಿಕ ನಿರ್ಣಯವನ್ನು ಧ್ವನಿ ಮತದಾನಕ್ಕೆ ಹಾಕಲಾಯಿತು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗಲೇ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದವು.
ಮೂರು ಪ್ರಶ್ನೆಗಳಿಗೆ ಸಿಗದ ಉತ್ತರ - ಗೊಗೊಯ್: ಸದನದ ಹೊರಗೆ ಮಾತನಾಡಿದ ಗೌರವ್ ಗೊಗೊಯ್, "ಪ್ರಧಾನಿ ಮೋದಿ ಅವರ ಭಾಷಣದಲ್ಲಿ ನಮ್ಮ ಮೂರು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಹೀಗಾಗಿ ಸಭಾತ್ಯಾಗ ಮಾಡಬೇಕಾಯಿತು. ಮಣಿಪುರದ ಜನರ ಬಗ್ಗೆ ನಮ್ಮ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಸದನದಿಂದ ಹೊರಬಂದವು'' ಎಂದು ತಿಳಿಸಿದರು.
"ಅವಿಶ್ವಾಸ ನಿರ್ಣಯವನ್ನು ನಾನು ಇಂಡಿಯಾ ಮೈತ್ರಿಕೂಟದ ಸದಸ್ಯನಾಗಿ ಲೋಕಸಭೆಯಲ್ಲಿ ಮಂಡಿಸಿದ್ದೆ. ಇಷ್ಟು ದಿನಗಳ ಹೋರಾಟದ ನಂತರ ಕೊನೆಗೂ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾತನಾಡುತ್ತಿರುವುದನ್ನು ದೇಶ ಗಮನಿಸುತ್ತಿತ್ತು. ಪ್ರಧಾನಿ ಮೋದಿ ತಮ್ಮ ಜವಾಬ್ದಾರಿಯಿಂದ ಓಡಿ ಹೋಗುತ್ತಿದ್ದಾರೆ'' ಎಂದು ದೂರಿದರು.
''ಮೋದಿ ಅವರ ಮುಂದೆ ನಮ್ಮ ಮೂರು ಸ್ಪಷ್ಟ ಪ್ರಶ್ನೆಗಳಿದ್ದವು. ಮಣಿಪುರಕ್ಕೆ ಭೇಟಿ ನೀಡದಿರುವ ಅವರಿಗೆ ಇಷ್ಟೊಂದು ಹಠ ಯಾಕೆ?, ಮಣಿಪುರದ ಮುಖ್ಯಮಂತ್ರಿಯನ್ನು ಯಾಕೆ ವಜಾ ಮಾಡಿಲ್ಲ?. ಇಷ್ಟು ದಿನ ಮಣಿಪುರದ ಬಗ್ಗೆ ಮೌನ ವಹಿಸಿದ್ದೇಕೆ ಹಾಗೂ ಶಾಂತಿಗಾಗಿ ಜನರಿಗೆ ಮನವಿ ಏಕೆ ಮಾಡಲಿಲ್ಲ?. ಹೀಗಾಗಿ, ಮೋದಿ ಭಾಷಣ ಮಾಡಿದರೂ ಮಣಿಪುರಕ್ಕೆ ನ್ಯಾಯ ಸಿಗಲಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಗ್ಗೆ ಭಯ ಯಾಕೆ? - ಅಧೀರ್ ರಂಜನ್:ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾದ ಅಧಿರ್ ರಂಜನ್ ಚೌಧರಿ ಮಾತನಾಡಿ,"ಪ್ರಧಾನಿ ಮಣಿಪುರದ ವಿಷಯದಲ್ಲಿ ಇಂದಿಗೂ 'ನೀರವ್' ಆಗಿಯೇ ಉಳಿದಿದ್ದಾರೆ. ಹಾಗಾದರೆ, ಹೊಸ 'ನೀರವ್ ಮೋದಿ'ಯನ್ನು ನೋಡಿ ಏನು ಪ್ರಯೋಜನ?. ಇಡೀ ದೇಶವೇ ನನ್ನೊಂದಿಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಅವರು ಕಾಂಗ್ರೆಸ್‌ಗೆ ಏಕೆ ಹೆದರುತ್ತಿದ್ದಾರೆ'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ:PM Modi: ಬೆಂಗಳೂರಿನಲ್ಲಿ ಯುಪಿಎ ಅಂತಿಮ ವಿಧಿವಿಧಾನ ನಡೆದಿದೆ; 2028ರಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ತನ್ನಿ: ಮೋದಿ ವಾಗ್ದಾಳಿ