ಶಿಯೋಪುರ್ (ಮಧ್ಯಪ್ರದೇಶ): ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ಗಳಿಗೆ ಸಂಬಂಧಿಸಿರುವ ಸಂಭವನೀಯ ಸೋಂಕು ಕಾರಣವಾಗಿರಬಹುದು ಶಂಕೆಯನ್ನು ಚೀತಾ ಪ್ರಾಜೆಕ್ಟ್ ಮುಖ್ಯಸ್ಥ ಎಸ್.ಪಿ ಯಾದವ್ ಅಲ್ಲಗಳೆದಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸದಸ್ಯ ಕಾರ್ಯದರ್ಶಿಯೂ ಆಗಿರುವ ಯಾದವ್, ಚೀತಾಗಳನ್ನು ದೇಶದಲ್ಲಿ ಮರು ಪರಿಚಯಿಸಿ ಒಂದು ವರ್ಷ ಪೂರ್ಣಗೊಂಡಿರುವ ಕುರಿತು ಸುದ್ದಿಸಂಸ್ಥೆಯೊಂದರ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದರು. "ಚೀತಾಗಳ ಮೇಲೆ ಎಲ್ಲಾ ಕಡೆ ನಿಗಾ ಇರಿಸಲಾಗಿದೆ. ರೇಡಿಯೋ ಕಾಲರ್ ಪ್ರಪಂಚದಲ್ಲಿಯೇ ಸಾಬೀತಾಗಿರುವ ತಂತ್ರಜ್ಞಾನ. ಚೀತಾಗಳು ರೇಡಿಯೋ ಕಾಲರ್‌ನಿಂದ ಸಾವನ್ನಪ್ಪಿದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು. ರೇಡಿಯೊ ಕಾಲರ್‌ಗಳಿಲ್ಲದೆ ಕಾಡಿನಲ್ಲಿ ಮೇಲ್ವಿಚಾರಣೆ ಸಾಧ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
"ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ದೇಶಕ್ಕೆ ತರಲಾಗಿದೆ. ಅವುಗಳಲ್ಲಿ 14 (ವಯಸ್ಕ) ಸಂಪೂರ್ಣವಾಗಿ ಆರೋಗ್ಯವಾಗಿವೆ. ಭಾರತದ ನೆಲದಲ್ಲಿ ನಾಲ್ಕು ಚೀತಾ ಮರಿಗಳು ಜನಿಸಿದ್ದು, ಅವುಗಳಲ್ಲಿ ಒಂದಕ್ಕೆ ಈಗ ಆರು ತಿಂಗಳಾಗಿದೆ. ಹವಾಮಾನ ವೈಪರೀತ್ಯಗಳಿಂದಾಗಿ 3 ಮರಿಗಳು ಸಾವನ್ನಪ್ಪಿವೆ" ಎಂದು ಯಾದವ್ ಮಾಹಿತಿ ನೀಡಿದರು.
ಈ ವರ್ಷ ಮಾರ್ಚ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 9 ಚೀತಾಗಳು ಸಾವನ್ನಪ್ಪಿವೆ. ಇತರ ದೇಶಗಳಲ್ಲಿ ಬೇಟೆಯಾಡುವುದು ಸಾವಿಗೆ ಕಾರಣವಾಗುತ್ತದೆ. ಆದರೆ ನಮ್ಮ ತಯಾರಿ ಎಷ್ಟು ಚೆನ್ನಾಗಿತ್ತು ಎಂದರೆ ಒಂದು ಚೀತಾ ಕೂಡ ಬೇಟೆಯಾಡುವುದು, ವಿಷಪ್ರಾಶನ ಅಥವಾ ಮಾನವ ಸಂಘರ್ಷದಿಂದ ಸಾವನ್ನಪ್ಪಿಲ್ಲ. ಕಳೆದ ವರ್ಷದಲ್ಲಿ ನಾವು ಯಶಸ್ವಿಯಾಗಿ ಮೈಲಿಗಲ್ಲುಗಳನ್ನು ಸಾಧಿಸಿದ್ದೇವೆ ಎಂದು ಯಾದವ್ ಹೇಳಿದರು.
ಇದನ್ನೂ ಓದಿ:ಆಫ್ರಿಕನ್ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ
ಮೊದಲ ಸ್ಥಳಾಂತರ: ''ಚೀತಾವನ್ನು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಸ್ಥಳಾಂತರಿಸುವ ಪ್ರಯತ್ನ ಎಂದಿಗೂ ನಡೆದಿಲ್ಲ. ಇದು ಮೊದಲ ಸ್ಥಳಾಂತರವಾಗಿತ್ತು. ಹಾಗಾಗಿ ಅದರಲ್ಲಿ ಸಾಕಷ್ಟು ಸವಾಲುಗಳಿದ್ದವು. ಸಾಮಾನ್ಯವಾಗಿ ಚೀತಾ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ದೂರದ ಸ್ಥಳಾಂತರದಿಂದ ಅದು ಸಾಯಬಹುದು. ಆದರೆ ಅಂತಹ ಯಾವುದೇ ಸಾವು ಇಲ್ಲಿ ಸಂಭವಿಸಿಲ್ಲ. ಸ್ಥಳಾಂತರ ತುಂಬಾ ತಡೆರಹಿತವಾಗಿತ್ತು" ಎಂದು ಅವರು ತಿಳಿಸಿದರು.
ಬದುಕುಳಿಯುವಿಕೆ ಪ್ರಮಾಣ ಶೇ.50 ಕ್ಕಿಂತ ಹೆಚ್ಚಿದೆ: "75 ವರ್ಷಗಳ ನಂತರ ಕಳೆದ ವರ್ಷ ಚೀತಾಗಳನ್ನು ದೇಶದಲ್ಲಿ ಪುನಃ ಪರಿಚಯಿಸಲಾಗಿದೆ. ನಾವು ಯಶಸ್ಸಿನ ದೃಷ್ಟಿಕೋನದಿಂದ ಕಳೆದ ವರ್ಷವನ್ನು ನೋಡಿದರೆ, ನಾವು ನಿಗದಿಪಡಿಸಿದ ಮಾನದಂಡವನ್ನು ಸಾಧಿಸಿದ್ದೇವೆ. ಚೀತಾಗಳ ಬದುಕುಳಿಯುವಿಕೆಯ ಪ್ರಮಾಣ ಶೇ.50 ಕ್ಕಿಂತ ಹೆಚ್ಚಿದೆ. ಚೀತಾಗಳ ಮರಿಗಳು ಭಾರತದ ನೆಲದಲ್ಲಿ ಹುಟ್ಟಿವೆ. ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯು ನಿರೀಕ್ಷೆಯಂತೆ ನಡೆಯುತ್ತಿದೆ. ಅಲ್ಲದೇ ಅವುಗಳು ತಮ್ಮದೇ ಆದ ಪ್ರದೇಶವನ್ನು ರಚಿಸುತ್ತಿವೆ. ತಮ್ಮದೇ ಆದ ಪ್ರದೇಶಕ್ಕಾಗಿ ಹೋರಾಡುತ್ತಿವೆ. ನೈಸರ್ಗಿಕವಾಗಿ ಬೇಟೆಯಾಡುತ್ತಿವೆ" ಎಂದು ಯಾದವ್ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಾದವ್, "ಎಂಒಯು ಪ್ರಕಾರ ದಕ್ಷಿಣ ಆಫ್ರಿಕಾ ಪ್ರತಿ ವರ್ಷ 12 ರಿಂದ 14 ಚೀತಾಗಳನ್ನು ನೀಡಲು ಸಿದ್ಧವಾಗಿದೆ. ಮುಂದಿನ ಬ್ಯಾಚ್ನ ಚೀತಾಗಳಿಗೆ ಎರಡು ತಾಣಗಳಲ್ಲಿ ಸಿದ್ಧತೆ ನಡೆಯುತ್ತಿವೆ. ಒಂದು ಮಧ್ಯಪ್ರದೇಶದ ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯ. ಅಲ್ಲಿ ವಾಸಸ್ಥಾನಕ್ಕೆ ಸೂಕ್ತವಾಗಿದೆ. ಆವರಣವನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ನವೆಂಬರ್-ಡಿಸೆಂಬರ್‌ನಲ್ಲಿ ಬೇಲಿ ಮತ್ತು ಆವರಣದ ಕೆಲಸ ಪೂರ್ಣಗೊಳ್ಳಲಿದೆ. ತಪಾಸಣೆಯ ನಂತರ ಚೀತಾಗಳನ್ನು ಅಲ್ಲಿಗೆ ತರಲು ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
(ಎಎನ್‌ಐ)
ಇದನ್ನೂ ಓದಿ:70 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹೆಜ್ಜೆ ಇಟ್ಟ ಆಫ್ರಿಕನ್ ಚೀತಾ.. ಏನಿದರ ವಿಶೇಷತೆ?