ನವದೆಹಲಿ:2022-23ನೇ ಸಾಲಿನ ಕೇಂದ್ರ ಬಜೆಟ್ ಆದಾಯ ತೆರಿಗೆ ಮತ್ತು ನೇರ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಮೂಲಕ ಆದಾಯ ತೆರಿಗೆ ಇಳಿಕೆಯಾಗುತ್ತದೆ ಎಂದು ಭಾವಿಸಿದ್ದವರಿಗೆ ಅತಿ ದೊಡ್ಡ ನಿರಾಸೆಯಾಗಿದೆ.
ಏಪ್ರಿಲ್ 1, 2020ರಲ್ಲಿ ಜಾರಿಗೆ ಬಂದ ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರಿಸಲಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿಯೂ ಕೂಡ ಯಾವುದೇ ಬದಲಾವಣೆ ತಂದಿಲ್ಲ. ಆದರೆ ವಿಶೇಷ ಚೇತನ ವ್ಯಕ್ತಿಯ 60 ವರ್ಷ ವಯಸ್ಸು ಮೇಲ್ಪಟ್ಟ ಪೋಷಕರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ತೆರಿಗೆದಾರರಿಗೆ ಹೊಸ ತೆರಿಗೆ ನಿಯಮವನ್ನು ಘೋಷಿಸಿದ್ದು, ಈ ವರ್ಷದ ಪರಿಷ್ಕೃತ ಐಟಿಆರ್ ಅನ್ನು ಎರಡು ವರ್ಷಗಳೊಳಗೆ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರಿ ನೌಕರರ ಎನ್ಪಿಎಸ್ ಕಡಿತವನ್ನು ಶೇಕಡಾ 10ರಿಂದ ಶೇಕಡಾ 14ರವರೆಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಒಟ್ಟಿಗೆ ತರಲು ಪ್ರಯತ್ನಿಸಲಾಗಿದೆ.
ಮೊದಲಿನಂತೆ ಎರಡೂವರೆ ಲಕ್ಷ ರೂಪಾಯಿಯವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಎರಡೂವರೆ ಲಕ್ಷದಿಂದ 5 ಲಕ್ಷ ರೂಪಾಯಿಗೆ ಶೇಕಡಾ 5ರಷ್ಟು ತೆರಿಗೆ, ಐದು ಲಕ್ಷ ರೂಪಾಯಿಯಿಂದ ಏಳೂವರೆ ಲಕ್ಷ ರೂಪಾಯಿಗೆ ಶೇಕಡಾ 10ರಷ್ಟು ತೆರಿಗೆ, ಏಳೂವರೆ ಲಕ್ಷ ರೂಪಾಯಿಯಿಂದ 10 ಲಕ್ಷದವರೆಗೆ ಶೇಕಡಾ 15ರಷ್ಟು, 10 ಲಕ್ಷ ರೂಪಾಯಿಯಿಂದ 12.50 ಲಕ್ಷದವರೆಗೆ 20ರಷ್ಟು ತೆರಿಗೆ ವಿಧಿಸಲಾಗುತ್ತದೆ. 2.50 ಲಕ್ಷದಿಂದ 15 ಲಕ್ಷದವರೆಗೆ ಶೇಕಡಾ 25ರಷ್ಟು ತೆರಿಗೆ, 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗಿದೆ.
Central Budget: ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.. ನಿರ್ಮಲಾ ಸೀತಾರಾಮನ್