ಮುಂಬೈ:ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಮಾದಕ ವಸ್ತು ನಿಗ್ರಹ ಸಂಸ್ಥೆ (ಎನ್‍ಸಿಬಿ) ಬಲೆಗೆ ಬಿದ್ದಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರ ಮೂವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಸ್ಟಾರ್ ನಟನ ಪುತ್ರನಿಗೆ ಇದೀಗ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.
ಈ ಕುರಿತು ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬಿದ್ದಿದೆ. ಬೇಲ್ ವಜಾಗೊಂಡಿರುವ ಕಾರಣ ಇದೀಗ ಆರ್ಯನ್ ಪರ ವಕೀಲರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅಕ್ಟೋಬರ್ 14 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ವಿ.ಪಾಟೀಲ್, ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿ ಅಕ್ಟೋಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಹಾಗಾಗಿ ಇಂದು ಆರ್ಯನ್ ಖಾನ್‍ಗೆ ಜಾಮೀನು ಸಿಗಬಹುದು ಎಂಬ ಮಾತು ಕೇಳಿ ಬರಲು ಶುರುವಾಗಿತ್ತು. ಆದರೆ, ಜಾಮೀನು ನೀಡಲು ಕೋರ್ಟ್ ನಿರಾಕರಣೆ ಮಾಡಿದೆ.
ಅಕ್ಟೋಬರ್ 3 ರಂದು ಮುಂಬೈನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್ (23)ನನ್ನು ಬಂಧಿಸಿತ್ತು. ಆರ್ಯನ್ ಜೊತೆಗೆ ಸ್ನೇಹಿತ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜೈಸ್ವಾಲ್, ವಿಕ್ರಾಂತ್ ಚೋಕರ್ ಹಾಗು ಗೋಮಿತ್ ಚೋಪ್ರಾ ಸೇರಿ ಹಲವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.