ಜೈಪುರ: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಒಂದು ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಸಾಧನೆ ಯಾವುದೂ ಇರಲಿಕ್ಕಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ನಾಲ್ಕು ವರ್ಷಗಳ ನಂತರವೂ ರಾಜಸ್ಥಾನದ ಜನತೆ ರಾಜ್ಯ ಸರ್ಕಾರದ ವಿರುದ್ಧವಾಗಿಲ್ಲ. ಸಾಮಾನ್ಯವಾಗಿ ಇಂಥ ಸಮಯದಲ್ಲಿ ಜನ ತಪ್ಪುಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ ರಾಜಸ್ಥಾನದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ದೇಶಾದ್ಯಂತ ಸಾಮಾಜಿಕ ಭದ್ರತೆಯನ್ನು ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ತಮ್ಮ ಬೇಡಿಕೆಯನ್ನು ಈ ಸಂದರ್ಭದಲ್ಲಿ ಅವರು ಪುನರುಚ್ಚರಿಸಿದರು. ಹಳೆಯ ಪಿಂಚಣಿ ಯೋಜನೆ (OPS) ಕುರಿತು ಮಾತನಾಡಿದ ಗೆಹ್ಲೋಟ್, ಸರ್ಕಾರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ವ್ಯಕ್ತಿಗೆ ಭದ್ರತೆ ಸಿಗುವುದು ಬಹಳ ಮುಖ್ಯ. ಏಕೆಂದರೆ ಅಷ್ಟು ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯ ಸಾಮಾಜಿಕ ಭದ್ರತೆಯ ಬಗ್ಗೆ ಕಾಳಜಿ ವಹಿಸಲೇಬೇಕು. ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತೆಗಾಗಿ ಅಗತ್ಯವಿರುವ ಹಣಕಾಸುಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ನಿರ್ವಹಿಸುವಂತೆ ಸಾಮಾನ್ಯ ನೀತಿ ಇರಬೇಕು ಎಂದರು.