ಅಂಗುಲ್ (ಒಡಿಶಾ):ಸರ್ಕಾರಗಳು ಆರೋಗ್ಯ ವ್ಯವಸ್ಥೆಯಲ್ಲಿ ಎಷ್ಟೇ ಸುಧಾರಣೆ ತಂದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅದರ ಲಭ್ಯತೆ ಕಡಿಮೆಯೇ. ಒಡಿಶಾದಲ್ಲಿ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಬಾರದ ಕಾರಣ 10 ಕಿಮೀವರೆಗೂ ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ ಆಘಾತಕಾರಿ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದುರಾದೃಷ್ಟವಶಾತ್ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಬ್ಯುಲೆನ್ಸ್ ಬಾರದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ:ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಮಂಗಳವಾರ ದನ ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಸಿಡಿಲು ಬಡಿದಿದೆ. ದಿಢೀರ್ ಕುಸಿದುಬಿದ್ದ ವ್ಯಕ್ತಿಗೆ ಸಿಡಿಲಿನಿಂದ ತೀವ್ರ ಘಾಸಿಯಾಗಿತ್ತು. ಇದನ್ನ ಕಂಡವರು ತಕ್ಷಣವೇ ಆಂಬ್ಯುಲೆನ್ಸ್ ಸೇವೆಯಾದ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಜನರು ಶತಪ್ರಯತ್ನ ಮಾಡಿದ್ದಾರೆ.
2 ಗಂಟೆಯಾದರೂ ಬರದ ಆಂಬ್ಯುಲೆನ್ಸ್:ಘಟನೆ ನಡೆದ ಬಳಿಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಆದರೆ, ಎರಡೂವರೆ ಗಂಟೆ ಕಳೆದರೂ ಆಂಬ್ಯುಲೆನ್ಸ್ ಬಂದಿರಲಿಲ್ಲ. ಇದರಿಂದ ಗಾಯಾಳು ವ್ಯಕ್ತಿ ಪ್ರಜ್ಞೆ ತಪ್ಪಿದ್ದ. ಇನ್ನು ತಡ ಮಾಡುವುದು ಬೇಡ ಎಂದುಕೊಂಡ ಕುಟುಂಬಸ್ಥರು ಯಾವುದೇ ವಾಹನ ವ್ಯವಸ್ಥೆ ಇಲ್ಲದ ಕಾರಣ, ಬೈಕ್ನಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಒಬ್ಬರು ಬೈಕ್ ಚಲಾಯಿಸಿದರೆ, ಇನ್ನೊಬ್ಬರು ವ್ಯಕ್ತಿಯನ್ನು ಹಿಡಿದು ಕುಳಿತಿದ್ದರು.