ಚೆನ್ನೈ(ತಮಿಳುನಾಡು) :ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿವೆ. ಈ ನಡುವೆ ವಿವಿಧ ಪಕ್ಷಗಳ ಮೈತ್ರಿ ಬಗ್ಗೆಯೂ ಸುದ್ದಿಗಳು ಹರದಾಡುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯ ಮಿತ್ರ ಪಕ್ಷ ಎಐಎಡಿಎಂಕೆ(ಅಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ) ಭಾರತೀಯ ಜನತಾ ಪಕ್ಷದೊಂದಿಗೆ ಸದ್ಯ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ನಾಯಕ ಡಿ. ಜಯಕುಮಾರ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚುನಾವಣಾ ಸಂದರ್ಭದಲ್ಲಿ ನಿರ್ಧರಿಸಲಾಗುವುದು. ಸದ್ಯ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದ್ದಾರೆ. ಇದು ಪಕ್ಷದ ನಿರ್ಧಾರವೇ ಹೊರತು ವೈಯಕ್ತಿಕ ನಿರ್ಧಾರ ಅಲ್ಲ. ಅದಾಗ್ಯೂ ಬಿಜೆಪಿಯು ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತದೆಯಾದರೂ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಇದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಅಣ್ಣಾಮಲೈ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಯಕುಮಾರ್, ನಮ್ಮ ನಾಯಕರ ಮೇಲಿನ ಟೀಕೆಗಳನ್ನು ನಮಗೆ ಒಪ್ಪಲು ಸಾಧ್ಯವಿಲ್ಲ. ಅಣ್ಣಾಮಲೈ ಈಗಾಗಲೇ ನಮ್ಮ ನಾಯಕಿ ಜಯಲಲಿತಾ ಅವರನ್ನು ಟೀಕಿಸಿದ್ದಾರೆ. ಈ ಸಂಬಂಧ ಅಣ್ಣಾಮಲೈ ವಿರುದ್ಧ ನಾವು ಸುತ್ತೋಲೆ ಹೊರಡಿಸಿದ್ದೆವು. ಅಣ್ಣಾಮಲೈ ಇಷ್ಟಕ್ಕೆ ಇದನ್ನು ನಿಲ್ಲಿಸಬೇಕಿತ್ತು. ಆದರೆ ತನ್ನ ವರಸೆಯನ್ನು ಮುಂದುವರೆಸಿ ಮತ್ತೆ ಅಣ್ಣಾ, ಪೆರಿಯಾರ್ ಮೊದಲಾದವರನ್ನು ಟೀಕಿಸಿದ್ದಾರೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ನಾಳೆ ನಾವು ಜನರ ಬಳಿ ತೆರಳಿ ಕೆಲಸ ಮಾಡಬೇಕು. ಆದ್ದರಿಂದ ಯಾವುದೇ ಆಯ್ಕೆಯಿಲ್ಲದೆ ಈ ನಿರ್ಧಾರವನ್ನು ಘೋಷಿಸಿದ್ದೇವೆ ಎಂದು ತಿಳಿಸಿದರು.